More

    ಒಂದು ಬಂಗಡೆ ಮೀನಿಗೆ ನೂರು ರೂ!

    ಕಾರವಾರ: ನಿರಂತರ ಮತ್ಸ್ಯ ಕ್ಷಾಮದ ಪರಿಣಾಮ ಈಗ ಮೀನು ಖರೀದಿಸುವವರ ಮೇಲೂ ಬಿದ್ದಿದೆ.

    ಕಾರವಾರ ಮೀನು ಮಾರುಕಟ್ಟೆಯಲ್ಲಿ ಶುಕ್ರವಾರ ಸಾಧಾರಣ ಗಾತ್ರದ ಒಂದು ಬಂಗಡೆ ಮೀನು 100 ರೂ.ಗೆ ಮಾರಾಟವಾಗುತ್ತಿದೆ. ಪಾಪ್ಲೆಟ್ 500 ರೂ.ಗೆ ಒಂದು ಸಿಗುತ್ತಿದೆ. 10 ರಿಂದ 12 ಮೀನುಗಳ ಒಂದು ಪಾಲಿಗೆ (ರಾಶಿ) 70 ರಿಂದ 80 ರೂ. ಇದ್ದ ತಾರ್ಲೆ, ಬೆಳ್ಳಂಜೆ, ಲೆಪ್ಪೆ, ಮುಂತಾದ ಮೀನುಗಳ ಬೆಲೆ 100 ರೂ.ಗೆ ಏರಿಕೆಯಾಗಿದೆ.

    ದರ ಏರಿಕೆಯೇಕೆ: ಹಿಂದೆಂದೂ ಕಾಣದ ರೀತಿಯಲ್ಲಿ ಮತ್ಸ್ಯ ಕ್ಷಾಮ ಈ ಬಾರಿ ಮೀನುಗಾರರನ್ನು ಬಾಧಿಸುತ್ತಿದೆ. ಪರ್ಸೀನ್ ಹಾಗೂ ಟ್ರಾಲರ್ ಬೋಟ್​ಗಳು ಆಳ ಸಮುದ್ರಕ್ಕೆ ತೆರಳಿ ಹತ್ತಿಪ್ಪತ್ತು ಕೆಜಿ ಮೀನು ಹಿಡಿದು ಬರುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನೂ ಹಲವು ಬಾರಿ ಬೋಟ್​ಗಳು ಸಮುದ್ರದಲ್ಲಿ ಮೀನು ಸಿಗದೇ ಖಾಲಿ ಕೈಲಿ ವಾಪಸಾಗುತ್ತಿವೆ.

    ಕಳೆದ ಸುಮಾರು 1 ತಿಂಗಳಿಂದ ಉಂಟಾದ ಈ ಕ್ಷಾಮದಿಂದ ದೋಣಿಗಳು ಸಮುದ್ರಕ್ಕಿಳಿದರೂ ಡೀಸೆಲ್ ಹಾಗೂ ಕಾರ್ವಿುಕರ ಖರ್ಚು ಹುಟ್ಟುತ್ತಿಲ್ಲ. ಇದರಿಂದ ಬಹುತೇಕ ಟ್ರಾಲರ್ ಬೋಟ್​ಗಳು ದಡದಲ್ಲೇ ಲಂಗರು ಹಾಕಿವೆ. ಹೊರ ರಾಜ್ಯಗಳಿಂದ ಬಂದ ಕಾರ್ವಿುಕರು ಕೆಲಸವಿಲ್ಲದೆ ವಾಪಸಾಗುತ್ತಿದ್ದಾರೆ. ಆಳ ಸಮುದ್ರಲ್ಲೇ ಹೆಚ್ಚಾಗಿ ಸಿಗುವ ಬಾಂಗಡೆ, ಪಾಪ್ಲೆಟ್​ನಂಥ ದೊಡ್ಡ ಮೀನುಗಳಿಗೆ ಬರ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ. ಶುಕ್ರವಾರ ಬೈತಖೋಲ್ ಬಂದರಿನಲ್ಲಿ ಮೀನುಗಾರಿಕೆಗೆ ಇಳಿದ 1 ಬೋಟ್​ನಲ್ಲಿ ಮಾತ್ರ ಬಂಗಡೆ ಮೀನು ಸಿಕ್ಕಿತ್ತು. ಇದರಿಂದ 34 ಕೆಜಿ ತೂಗುವ ಒಂದು ಬುಟ್ಟಿ ಮೀನು 8500 ರೂ.ಗೆ ಮಾರಾಟವಾಯಿತು. ಇದೇ ರೀತಿ ದಿನವೂ ಬೆಲೆ ಹೆಚ್ಚುತ್ತಲೇ ಇದೆ.

    ಡೀಸೆಲ್ ಸಬ್ಸಿಡಿ ವಿಳಂಬ: ಮಳೆಗಾಲದ ಮೀನುಗಾರಿಕೆ ನಿಷೇಧದ ನಂತರ ಆಗಸ್ಟ್​ನಲ್ಲಿ ಮೀನುಗಾರಿಕೆ ಪ್ರಾರಂಭವಾದರೂ ಅರಬ್ಬಿ ಸಮುದ್ರದಲ್ಲಿ ನಿರಂತರ ಬಿರುಗಾಳಿಯಿಂದ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ನಂತರ ಸಾಗರ ಮಾಲಾ ಯೋಜನೆ ವಿರೋಧಿಸಿ ಪ್ರತಿಭಟಗಾಗಿ ಮೀನುಗಾರಿಕೆ ಬಂದ್ ಮಾಡಲಾಯಿತು. ಈಗ ಬೋಟ್​ಗಳು ಕಡಲಿಗಿಳಿದರೂ ಲಾಭವಿಲ್ಲದಂತಾಗಿದೆ. ಈ ನಡುವೆ ಸರ್ಕಾರದಿಂದ ಬೋಟ್ ಮಾಲೀಕರ ಖಾತೆಗೆ ಮಾಸಿಕ ಜಮಾ ಆಗುತ್ತಿದ್ದ ಡೀಸೆಲ್ ಸಬ್ಸಿಡಿ ಸಹ ಎರಡು ತಿಂಗಳಿಂದ ವಿಳಂಬವಾಗಿದೆ.

    ಆಗ ತೂಫಾನ್, ಈಗ ಮತ್ಸ್ಯ ಕ್ಷಾಮದಿಂದ ಮೀನುಗಾರರು ಕಂಗಾಲಾಗಿದ್ದಾರೆ. ಬೋಟ್ ಖರೀದಿಗೆ ಪಡೆದ ಸಾಲದ ಕಂತು, ಬಡ್ಡಿ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಮೀನುಗಾರರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. – ವಿನಾಯಕ ಹರಿಕಂತ್ರ, ಮೀನುಗಾರರ ಮುಖಂಡ, ಬೈತಖೋಲ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts