More

    ಒಂದಾಗಿದ್ದರೆ ಎಲ್ಲ.. ಬೇರೆಯಾದರೆ ಏನಿಲ್ಲ!

    ಲಕ್ಷೆ್ಮೕಶ್ವರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರಾಗಿದ್ದ ಮೂರು ಜೋಡಿಗಳು ಮತ್ತೆ ಒಂದಾದ ಘಟನೆ ಲಕ್ಷೆ್ಮೕಶ್ವರ ಹಾಗೂ ನರಗುಂದದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್​ನಲ್ಲಿ ನಡೆದಿದೆ.

    ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದ ಶಿಕ್ಷಕ ದಂಪತಿ ಸುರೇಶ ಫಕೀರಪ್ಪ ತಂಗೋಡ ಹಾಗೂ ಗೀತಾ ಸುರೇಶ ತಂಗೋಡ ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಕಳೆದ ವರ್ಷ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗುವಿದ್ದು 2 ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಲಕ್ಷೆ್ಮೕಶ್ವರದಲ್ಲಿ ನಡೆದ ಲೋಕ ಅದಾಲತ್​ನಲ್ಲಿ ಈ ಇಬ್ಬರ ಮನವೊಲಿಸಿ ಮಗುವಿನ ಭವಿಷ್ಯಕ್ಕಾಗಿ ಸಹಜೀವನ ನಡೆಸುವಂತೆ ಸಲಹೆ ನೀಡಿ ಇಬ್ಬರನ್ನು ಮತ್ತೆ ಒಂದುಗೂಡಿಸಲಾಯಿತು.

    ಮತೊಂದು ಪ್ರಕರಣದಲ್ಲಿ ಲಕ್ಷೆ್ಮೕಶ್ವರ ಭೀಮಪ್ಪ ಸೋಮಪ್ಪ ಪಶುಪತಿಹಾಳ ಮತ್ತು ಮಾಲಾಶ್ರೀ ದಂಪತಿ ದುಡುಕಿನ ನಿರ್ಧಾರದಿಂದ 4 ತಿಂಗಳ ಹಿಂದೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿತ್ತು. ಅದಾಲತ್​ನಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಿ ಒಂದಾಗುವಂತೆ ಮಾಡಲಾಯಿತು.

    ಹಿರಿಯ ದಿವಾಣಿ ನ್ಯಾಯಾಧೀಶೆ ಸರ್ವಮಂಗಳಾ ಕೆ.ಎಂ ಅವರ ಸಮ್ಮುಖದಲ್ಲಿ ಎರಡೂ ಜೋಡಿಗಳನ್ನು ಒಗ್ಗೂಡಿಸಿ ಪರಸ್ಪರ ಹೂವಿನ ಹಾರ ಬದಲಾಯಿಸಿ ಒಂದಾಗಿಸಲಾಯಿತು. ವಕೀಲರಾದ ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಘೊಂಗಡಿ, ಜೆ.ಡಿ. ದೊಡ್ಡಮನಿ, ಎನ್.ಐ.ಬೆಲ್ಲದ, ಎನ್.ಎಂ. ಗದಗ, ಕಮಲಾ ನಾಯಕ, ಉಮಾ ಬಳ್ಳಾರಿ ಇತರರಿದ್ದರು.

    ಜೀವನಾಂಶಕ್ಕಿಂತ ಜೀವನ ಮುಖ್ಯ

    ರಗುಂದ: ಜೀವನಾಂಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ದಂಪತಿ ದಿವಾಣಿ ನ್ಯಾಯಾಧೀಶೆ ಗಾಯತ್ರಿ ಎಚ್.ಡಿ. ಅವರ ಸಮ್ಮುಖದಲ್ಲಿ ನಡೆದ ಲೋಕ ಅದಾಲತ್​ನಲ್ಲಿ ಮತ್ತೆ ಒಂದಾಗಿ ಸಂತಸದ ನಗೆ ಬೀರಿದೆ.

    ನರಗುಂದದ ಸೋಮಾಪೂರ ಬಡಾವಣೆಯ ಹೇಮಾವತಿ ಹಾಗೂ ಪ್ರವೀಣ ಕೋಲಕಾರ ದಂಪತಿ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ಕಲಹ ಉಂಟಾಗಿ ಇಬ್ಬರೂ ಬೇರ್ಪಟ್ಟಿದ್ದರು. ವಿಶೇಷವೆಂದರೆ ಪತಿ-ಪತ್ನಿ ಇಬ್ಬರೂ ಪೊಲೀಸ್ ಅಧಿಕಾರಿಗಳ ಮಕ್ಕಳಾಗಿದ್ದಾರೆ. ಪತ್ನಿ ಹೇಮಾವತಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮೂರು ವರ್ಷಗಳಿಂದಲೂ ದಂಪತಿ ಕೋರ್ಟ್​ಗೆ ಅಲೆದು ಸುಸ್ತಾಗಿತ್ತು. ಶನಿವಾರ ನಡೆದ ಅದಾಲತ್​ನಲ್ಲಿ ನ್ಯಾಯಾಧೀಶರ ಸಲಹೆ ಮೇರೆಗೆ ಮತ್ತೆ ಒಂದಾದರು.

    ಅದಾಲತ್​ನಲ್ಲಿ 1126 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 15 ಜನನ-ಮರಣ, 10 ಸಿವಿಲ್, 10 ಚೆಕ್​ಬೌನ್ಸ್, 1 ಜೀವನಾಂಶ ಪ್ರಕರಣ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಒಳಗೊಂಡಂತೆ ಒಟ್ಟು 223 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. 48 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಯಿತು.

    ವಕೀಲರಾದ ಎಸ್.ಬಿ. ಮುದೇನಗುಡಿ, ರಮೇಶ ನಾಯ್ಕರ, ಆರ್.ಸಿ. ಇಂಗಳಳ್ಳಿ, ಎಸ್.ಕೆ. ಹರಪನಹಳ್ಳಿ, ಬಿ.ಎನ್. ಭೋಸಲೆ, ವಿನಾಯಕ ದೇಶಪಾಂಡೆ, ಎಸ್.ಆರ್. ಪಾಟೀಲ, ಎಂ.ಎಚ್. ತಹಸೀಲ್ದಾರ, ಎಸ್.ಎಂ. ಗುಗ್ಗರಿ, ಬಿ.ಎಸ್. ಕಲ್ಲಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts