More

    ಐವರು ಬೇಟೆಗಾರರ ಬಂಧನ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ತಾಲೂಕಿನ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವನ್ಯಮೃಗಗಳನ್ನು ಬೇಟೆಯಾಡಲು ಉತ್ತರಕನ್ನಡ ಜಿಲ್ಲೆಯಿಂದ ಕಾರಿನಲ್ಲಿ ಬಂದಿದ್ದ ಐವರು ಬೇಟೆಗಾರರ ತಂಡವನ್ನು ಹಾನಗಲ್ಲ ಅರಣ್ಯಾಧಿಕಾರಿಗಳು ಸೋಮವಾರ ಬೆಳಗಿನ ಜಾವ ಸಿನೀಮಿಯ ರೀತಿಯಲ್ಲಿ ಬಂಧಿಸಿದ್ದಾರೆ.

    ಶಿರಶಿಯ ಅಬ್ದುಲ್​ರಜಾಕ್ ಇಸ್ಮಾಯಿಲ್​ಸಾಬ್ ಶಿಶಿ, ಅಬ್ದುಲ್​ಖಾನ್ ಇನಾಯತ್​ಖಾನ ಖಾಜಿ, ಸಲ್ಮಾನ್ ಇನಾಯತ್ ಶೇಖ್ ಬಚಗಾಂವ ಗ್ರಾಮದ ಅದ್ನಾನ ಫಯಾಜ್ ಖಾನ್, ಬನವಾಸಿಯ ನಿಯಾಜ್ ಅಹ್ಮದ್ ಇನಾಮದಾರ ಬಂಧಿತರು.

    ಉತ್ತರಕನ್ನಡ ಜಿಲ್ಲೆಯಿಂದ ಭಾನುವಾರ ರಾತ್ರಿ ಆಗಮಿಸಿದ್ದ ಬೇಟೆಗಾರರು ತಾಲೂಕಿನ ಕೊಂಡೋಜಿ- ಮಕರವಳ್ಳಿ ಅರಣ್ಯ ಪ್ರದೇಶದ ರಸ್ತೆಯಲ್ಲಿ ತಡರಾತ್ರಿ 3 ಗಂಟೆ ಸುಮಾರಿಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಹಾನಗಲ್ಲ ಅರಣ್ಯ ಇಲಾಖೆ ಅಧಿಕಾರಿಗಳು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಆರೋಪಿಗಳು ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದೆ ಸಾಗಿದ್ದಾರೆ. ಅವರನ್ನು ಬೆನ್ನಟ್ಟಿದ ಅಧಿಕಾರಿಗಳು ಆರೋಪಿಗಳ ಕಾರಿಗೆ ಜೀಪ್ ಅಡ್ಡಗಟ್ಟಿದ್ದಾರೆ. ಆರೋಪಿಗಳು ಕಾರನ್ನು ಹಿಮ್ಮುಖವಾಗಿ ಚಲಾಯಿಸಿದಾಗ ಹಿಂದಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಆಗ ಅರಣ್ಯಾಧಿಕಾರಿಗಳು ಐವರನ್ನು ಬಂಧಿಸಿ ವಿಚಾರಿಸಿದಾಗ ಬೇಟೆಯಾಡುವ ವಿಷಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ ಒಂದು ನಾಡಬಂದೂಕು, ಐದು ಜೀವಂತ ಗುಂಡುಗಳು, ಮೂರು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಶಿರಶಿ ಮಾರ್ಗವಾಗಿ ಹಾನಗಲ್ಲಿಗೆ ಆಗಮಿಸಿದ್ದ ಆರೋಪಿಗಳು ಭಾನುವಾರ ರಾತ್ರಿ ತಾಲೂಕಿನ ಹನುಮನಕೊಪ್ಪ, ದ್ಯಾಮನಕೊಪ್ಪ, ಮೂಡೂರು, ಮಾವಕೊಪ್ಪ, ಮಕರವಳ್ಳಿ, ಕ್ಯಾಸನೂರು, ಕೋಣನಕೊಪ್ಪ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸಿ ವನ್ಯಜೀವಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಕರವಳ್ಳಿ ಸಮೀಪ ಅರಣ್ಯಾಧಿಕಾರಿಗಳ ಕೈಗೆ ಕಾರು ಸಮೇತ ಸಿಕ್ಕಿಬಿದ್ದಿದ್ದಾರೆ.

    ಎಸಿಎಫ್ ಬಿ.ವೈ. ಈಳಗೇರ, ಆರ್​ಎಫ್​ಒ ಶಿವರಾಜ ಮಠದ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಎಸ್.ಎಂ. ತಳವಾರ, ಎಸ್.ಕೆ. ರಾಠೋಡ, ಅರಣ್ಯರಕ್ಷಕ ಕೃಷ್ಣಾ ಲಮಾಣಿ, ಹನುಮಂತಪ್ಪ ಪೂಜಾರ, ಸುರೇಶ ಅಂಗಡಿ, ರಫೀಕ ಝುಂಡೇರ, ಪ್ರವೀಣ ಹುಗ್ಗೇರ ಹಾಗೂ ಚಾಲಕ ಸುರೇಶ ಗೂರ್ಖಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts