More

    ಐಪಿಎಲ್‌ಗೆ ಮುನ್ನ ಯುಎಇಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ?

    ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿರುವ ನಡುವೆ, ಅದಕ್ಕೆ ಪೂರ್ವಭಾವಿಯಾಗಿ ಅರಬ್ ರಾಷ್ಟ್ರದಲ್ಲೇ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಭಾರತ ತಂಡ ದ್ವಿಪಕ್ಷೀಯ ಸರಣಿಯೊಂದನ್ನು ಆಡುವ ನಿರೀಕ್ಷೆ ಹರಡಿದೆ. ಹಾಲಿ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3 ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯಗಳನ್ನು ಐಪಿಎಲ್‌ಗೆ ಮುನ್ನ ಯುಎಇಯಲ್ಲೇ ಆಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೂ ಈಗ ಕೇಳಿಕೊಂಡಿದೆ ಎನ್ನಲಾಗಿದೆ. ಐಪಿಎಲ್ ಟೂರ್ನಿಯನ್ನು ದೀಪಾವಳಿಗೆ ಒಂದು ವಾರ ಮುಂಚಿತವಾಗಿಯೇ ಮುಕ್ತಾಯಗೊಳಿಸುವ ವೇಳಾಪಟ್ಟಿ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಅಸಮಾಧಾನಗೊಂಡಿರುವುದರಿಂದಾಗಿ ಬಿಸಿಸಿಐ ಈ ಸರಣಿ ಆಡಲು ಉತ್ಸುಕವಾಗಿದೆ ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ಕರೊನಾ ಹಾವಳಿಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮೊಟಕುಗೊಂಡ ಹಿನ್ನೆಲೆಯಲ್ಲೂ, ಅದರ ನಷ್ಟವನ್ನು ತುಂಬಿಕೊಡುವುದಕ್ಕಾಗಿ ಬಿಸಿಸಿಐ 3 ಪಂದ್ಯಗಳ ಸರಣಿಗೆ ಸಿದ್ಧವಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: VIDEO: ಮಳೆಯಲ್ಲಿ ಮಗಳೊಂದಿಗೆ ಸುರೇಶ್ ರೈನಾ ಜಾಲಿ ಡ್ರೈವ್…!

    ಕಳೆದ ಮಾರ್ಚ್‌ನಿಂದ ಯಾವುದೇ ಪಂದ್ಯ ಆಡದ ಭಾರತ ತಂಡದ ಆಟಗಾರರು, 2 ತಿಂಗಳ ಕಾಲ ಐಪಿಎಲ್‌ನಲ್ಲಿ ಆಡಬೇಕಾಗಿದ್ದು, ಅದರ ಬೆನ್ನಲ್ಲೇ ಸವಾಲಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಬೇಕಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಿಂದ ಆಟಗಾರರ ಫಿಟ್ನೆಸ್ ಬಗ್ಗೆ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿದೆಯೇ ಎಂಬ ಮಾತು ಕೂಡ ಬಿಸಿಸಿಐ ವಲಯದಲ್ಲಿ ಹರಿದಾಡುತ್ತಿದೆ. 4 ತಿಂಗಳ ಕಾಲ ಐಸೋಲೇಷನ್‌ನಲ್ಲಿರುವ ಆಟಗಾರರು ಲಯ ಕಂಡುಕೊಳ್ಳಲು ಹೆಚ್ಚಿನ ಸಮಯ ನೀಡುವುದು ಉತ್ತಮ ಎಂಬ ಮಾತುಗಳೂ ಇವೆ. ಇದಲ್ಲದೆ ಐಪಿಎಲ್ ಫ್ರಾಂಚೈಸಿಗಳೂ ಟೂರ್ನಿಗೆ ಮುನ್ನ ತಂಡದ ಪ್ರಮುಖ ಆಟಗಾರರನ್ನು ಬಿಟ್ಟುಕೊಡಲು ಒಪ್ಪುವುದು ಅನುಮಾನ ಎನ್ನಲಾಗಿದೆ.

    ಐಪಿಎಲ್ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭ?
    ಐಪಿಎಲ್ ಟೂರ್ನಿ ಯುಎಇಯಲ್ಲಿ ಆಯೋಜನೆಗೊಂಡಾಗ ಪಂದ್ಯಗಳು ರಾತ್ರಿ 8ಕ್ಕೆ ಬದಲಾಗಿ 7.30ಕ್ಕೆ ಆರಂಭಗೊಳ್ಳುವ ಸಾಧ್ಯತೆ ಇದೆ. ಯುಎಇ ಕಾಲಮಾನದ ಪ್ರಕಾರ ಸಂಜೆ 5 ಗಂಟೆಗೆ ಪಂದ್ಯವನ್ನು ಆರಂಭಿಸುವುದು ಬಿಸಿಸಿಐ ಯೋಜನೆಯಾಗಿದೆ. ಇನ್ನು ಭಾರತೀಯ ಕಾಲಮಾನದ ಪ್ರಕಾರ ಸಂಜೆ 4 ಗಂಟೆಗೆ ಹೆಚ್ಚಿನ ಪಂದ್ಯಗಳು ನಡೆಯುವುದನ್ನು ತಪ್ಪಿಸುವ ಸಲುವಾಗಿ ಐಪಿಎಲ್ ಟೂರ್ನಿ ಒಂದು ವಾರ ಮುಂಚಿತವಾಗಿ ಆರಂಭಗೊಳ್ಳಬಹುದು. ಅಂದರೆ ಸೆಪ್ಟೆಂಬರ್ 26ಕ್ಕೆ ಬದಲಾಗಿ 19ರಂದೇ ಆರಂಭಗೊಳ್ಳಬಹುದು ಎನ್ನಲಾಗಿದೆ. ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ಶುಕ್ರವಾರ ನಡೆಯುವ ನಿರೀಕ್ಷೆ ಇದ್ದು, ಆ ಬಳಿಕ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts