More

    ಎಸ್.ಎಂ. ಕೃಷ್ಣ ನಗರ ಸಾಮಾನ್ಯ ವಲಯ

    ಗದಗ: ಗದಗ ನಗರದ ಎಸ್.ಎಂ. ಕೃಷ್ಣ ನಗರವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೊಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ಜಿಲ್ಲೆಯನ್ನು ಕಿತ್ತಳೆ ವಲಯವಾಗಿ ವರ್ಗೀಕರಿಸಲಾಗಿದೆ. ಜಿಲ್ಲೆಯ ಒಳಗೆ ಮತ್ತು ಅಂತರ್ ಜಿಲ್ಲೆ ಬಸ್ ಸಾರಿಗೆ ನಿರ್ಬಂಧಿಸಿದೆ. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು, ದೀರ್ಘಾವಧಿ ರೋಗಗಳನ್ನು ಹೊಂದಿರುವವರು, ಗರ್ಭಿಣಿಯರು ವೈದ್ಯಕೀಯ ಉದ್ದೇಶಕ್ಕಾಗಿ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಪಡೆಯುವುದನ್ನು ಹೊರತುಪಡಿಸಿ ಮನೆಯಿಂದ ಹೊರ ಬರುವುದನ್ನು ನಿಷೇಧಿಸಲಾಗಿದೆ. ಅಂತರ್ ಜಿಲ್ಲೆ ಹಾಗೂ ಜಿಲ್ಲಾ ವ್ಯಾಪ್ತಿ ಸರಕು ಸಾಗಾಣಿಕೆ ವಾಹನಗಳ ಸಾಗಾಟಕ್ಕೆ ನಿರ್ಬಂಧ ಇರುವುದಿಲ್ಲ ಹಾಗೂ ಪಾಸ್ ಇದಕ್ಕೆ ಅವಶ್ಯಕತೆ ಇರುವುದಿಲ್ಲ.

    ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಹಾಗೂ 5ಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಸಾರ್ವಜನಿಕರು ತಿರುಗಾಡುವುದನ್ನು ನಿಷೇಧಿಸಲಾಗಿದೆ.

    ಸರ್ಕಾರಿ ವಾಹನಗಳಿಗೆ ಮತ್ತು ಕೋವಿಡ್ 19 ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರತ ವಾಹನಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ. ನಿಯಂತ್ರಿತ ವಲಯಕ್ಕೆ ಇದರೊಂದಿಗೆ ಹೆಚ್ಚುವರಿಯಾದ ನಿರ್ಬಂಧಗಳು ಮುಂದುವರಿಯುತ್ತವೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಸೂಚನೆ

    ಗದಗ: ಜಿಲ್ಲಾ ವ್ಯಾಪ್ತಿಯ ಗ್ರಾಮಗಳ ಸಣ್ಣಪುಟ್ಟ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಮತ್ತು ಮದ್ಯ ಮಾರಾಟ ಮಳಿಗೆಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿವೆ. ಈ ಅಕ್ರಮಗಳನ್ನು ತಕ್ಷಣವೇ ನಿಲ್ಲಿಸಲು ಗ್ರಾಮ ಪಂಚಾಯಿತಿಗಳ ಮೂಲಕ ಪರಿಣಾಮಕಾರಿ ಕ್ರಮ ಜಾರಿಗೊಳಿಸಬೇಕು ಎಂದು ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಅವರು ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಮದ್ಯ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಮತ್ತು ಇಡೀ ಕುಟುಂಬ ಅನುಭವಿಸುವ ಸಂಕಷ್ಟ ತಿಳಿದು ಮದ್ಯಪಾನ ಚಟಕ್ಕೆ ದಾಸರಾಗಿ ಹಣ ಖರ್ಚು ಮಾಡುತ್ತಿರುವುದು ದುರದೃಷ್ಟಕರ.

    ಕೋವಿಡ್-19 ಸೋಂಕು ನಿಯಂತ್ರಣದ ಈ ಸಂದರ್ಭವನ್ನು ಬಳಸಿಕೊಂಡು ಗ್ರಾಮೀಣ ವ್ಯಾಪ್ತಿಯ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಕಾನೂನಿನಡಿ ಅಪರಾಧ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಎಲ್ಲ ಅಂಗಡಿಗಳನ್ನು ಪರಿಶೀಲನೆ ಮಾಡಬೇಕು. ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದು ಕಂಡು ಬಂದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಪಂ ಅಧ್ಯಕ್ಷರು ತಿಳಿಸಿದ್ದಾರೆ.

    ಪರಸ್ಪರ ಕ್ಷೌರ ಮಾಡಿಕೊಂಡ ಕಾರ್ವಿುಕರು

    ಮುಳಗುಂದ: ಲಾಕ್​ಡೌನ್​ನಿಂದಾಗಿ ಕ್ಷೌರಿಕರಿಲ್ಲದೇ ತೊಂದರೆ ಅನುಭವಿಸುತ್ತಿರುವ ಪಟ್ಟಣದ ಹೊರವಲಯದ ಕಲ್ಲು ಗಣಿ ಕ್ರಷರ್​ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರು, ಪರಸ್ಪರ ಒಬ್ಬರಿಗೊಬ್ಬರು ಕ್ಷೌರ ಮಾಡಿಕೊಂಡು ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ.

    ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಸೇರಿ ವಿವಿಧ ರಾಜ್ಯಗಳ ನೂರಾರು ಕಾರ್ವಿುಕರು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆಂದು ಬಂದು ಇಲ್ಲಿಯೇ ಉಳಿದಿದ್ದಾರೆ. ಕ್ರಷರ್​ಗಳು ಬಂದ್ ಆದಾಗಿನಿಂದ ಕ್ರಷರ್ ಮಾಲೀಕರು ಇವರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಮಾಡಿ ಅಲ್ಪಸ್ವಲ್ಪ ಕೆಲಸ ನೀಡುತ್ತಿದ್ದಾರೆ.

    ಪೊಲೀಸರಿಗೆ ಆಯುರ್ವೆದ ಔಷಧ ವಿತರಣೆ

    ಗದಗ:ಮಾರಕ ಕರೊನಾ ಸೋಂಕು ನಿಮೂಲನೆಗಾಗಿ ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.

    ಆಯುಷ್ ಇಲಾಖೆ ತಯಾರಿಸಿದ ಆಯುರ್ವೆದಿಕ್ ಕಷಾಯ ಪುಡಿ, ಚವನ್​ಪ್ರಾಶ, ಹೋಮಿಯೋಪತಿ ಔಷಧಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿಗೆ ವಿತರಿಸಿ ಅವರು ಮಾತನಾಡಿದರು.

    ‘ಆಯುಷ್ ಇಲಾಖೆಯು ರೋಗ ನಿರೋಧಕ ಶಕ್ತಿ ವೃದ್ಧಿಸಿ ಆರೋಗ್ಯ ವರ್ಧಿಸುವ ಆಯುರ್ವೆದ ಕಷಾಯಪುಡಿ, ಹೋಮಿಯೋಪಥಿ ಔಷಧಗಳನ್ನು ತಯಾರಿಸಿದೆ. ಈ ಔಷಧಗಳನ್ನು ಈಗಾಗಲೇ ಕರೊನಾ ಸೋಂಕಿತ ಪ್ರದೇಶಗಳಾದ ರಂಗನವಾಡಿ ಗಲ್ಲಿ, ಗಂಜೀಬಸವೇಶ್ವರ ವರ್ತಳ, ಎಸ್.ಎಂ. ಕೃಷ್ಣ ನಗರ, ಜನತಾ ಕಾಲನಿಗಳಲ್ಲಿ ವಿತರಿಸಲಾಗಿದೆ’ ಎಂದು ಹೇಳಿದರು.

    ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಮಾತನಾಡಿದರು. ಡಾ. ಕಮಲಾಕರ ಅರಳೆ, ಡಾ. ಮಹೇಶ ಹಿರೇಮಠ, ಡಾ. ಪ್ರವೀಣ ಸರ್ವದೆ, ಸುಧಾ ಜಾಲಿಹಾಳ, ತೌಸಿಫ್ ನರೇಗಲ್, ವೆಂಕಟೇಶ ಅವರಾದಿ, ಲಕ್ಷ್ಮಿ ರಾಮಣ್ಣವರ, ಕಿರಣ ಹಿರೇಮಠ ಇತರರು ಉಪಸ್ಥಿತರಿದ್ದರು.

    ಅಕ್ಷಯ ಜೋಳಿಗೆಗೆ ಪಿಂಚಣಿ ಹಣ

    ಗದಗ:ಇಲ್ಲಿನ ನಂದೀಶ್ವರ ನಗರದ ಇಂದಿರಾಬಾಯಿ ದುರ್ಗಪ್ಪ ತೇರದಾಳ ಅವರು ತಮಗೆ ಪ್ರತಿ ತಿಂಗಳು ಬರುತ್ತಿರುವ 10 ಸಾವಿರ ರೂ ಪಿಂಚಣಿ ಹಣವನ್ನು ಮನುಕುಲದ ಕಲ್ಯಾಣಕ್ಕಾಗಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಆರಂಭಿಸಿರುವ ಭಿಕ್ಷಾ ಅಭಿಯಾನದ ಅಕ್ಷಯ ಜೋಳಿಗೆಗೆ ಹಾಕಿದರು.

    ಅನಿಲ ಮೆಣಸಿನಕಾಯಿ ಮಾತನಾಡಿ, ‘ಜಿಲ್ಲೆಯ ರೈತರು, ದಾನಿಗಳಿಂದ ಸಂಗ್ರಹಿಸಿದ ದವಸ ಧಾನ್ಯ ಹಾಗೂ ಅಕ್ಷಯ ಜೋಳಿಗೆಗೆ ಬಂದ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

    ಗದಗ 19ನೇ ವಾರ್ಡ್​ನ ಖಾನತೋಟದಲ್ಲಿ ಅಬ್ದುಲ್ ಮುನಾಫ್ ಮುಲ್ಲಾ ಎಂಬುವವರು 125 ಕೆಜಿ ಅಕ್ಕಿಯನ್ನು ದಾನ ನೀಡಿದರು.

    ಮಾಸ್ಕ್ ಧರಿಸದವರಿಗೆ ದಂಡ

    ಮುಳಗುಂದ: ಸರ್ಕಾರದ ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರಿಗೆ ಪಟ್ಟಣ ಪಂಚಾಯಿತಿ ದಂಡ ವಿಧಿಸಿ ಜಾಗೃತಿ ಮೂಡಿಸುತ್ತಿದೆ. ಇದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ಅವರು ತಮ್ಮ ಸಿಬ್ಬಂದಿಯೊಂದಿಗೆ ಪಟ್ಟಣದ ಮಾರ್ಕೆಟ್ ರಸ್ತೆಗಳಲ್ಲಿ ಸಂಚರಿಸಿ ಮುಖಗವಸು ಧರಿಸದವರಿಗೆ ಮುಲಾಜಿಲ್ಲದೇ ದಂಡ ಹಾಕುತ್ತಿದ್ದಾರೆ.

    ಮೂರನೇ ಹಂತದ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲ ನಿರ್ಬಂಧಗಳಿಗೆ ಸಡಿಲಿಕೆ ತರಲಾಗಿದೆ. ಆದರೆ, ಕೆಲವರು ಮಾಸ್ಕ್ ಧರಿಸದೆ ತಿರುಗುತ್ತಿರುವುದನ್ನು ಮನಗಂಡ ಪಪಂ ದಂಡ ವಿಧಸುವ ಕಾರ್ಯಕ್ಕೆ ಮುಂದಾಗಿದೆ. ಬೆಳಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಸೇರಿ ಇತರ ಕಟ್ಟಡ ಸಾಮಗ್ರಿ ಖರೀದಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಗ್ರಾಹಕರು ಹೀಗೆ ಖರೀದಿ ಸಮಯದಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಸಂಚರಿಸುವಾಗ ರಸ್ತೆ ಮೇಲೆ ಉಗುಳುವುದು ಸೇರಿ ಲಾಕ್​ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದವರಿಂದ ಮೂರು ದಿನಗಳಲ್ಲಿ ಒಟ್ಟು 11,230 ರೂ.ದಂಡ ವಸೂಲಿ ಮಾಡಲಾಗಿದೆ. ಹೀಗೆ ವಸೂಲು ಮಾಡಲಾದ ದಂಡದ ಹಣವನ್ನು ಪಪಂ ಸಾಮಾನ್ಯ ನಿಧಿಗೆ ಜಮಾ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts