More

    ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆ

    ಹಾಸನ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದು ಇಳೆಗೆ ತಂಪೆರೆಯಿತು.
    ಕಳೆದ ಮೂರು ದಿನಗಳ ಹಿಂದೆಯೂ ಮಳೆಯಾಗಿ ಭೂಮಿ ತಂಪಾಗಿತ್ತು. ಮಂಗಳವಾರ ಸುರಿದ ಸಿಡಿಲು ಗುಡುಗು ಆರ್ಭಟದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಹಾಸನದ ಕೆ.ಆರ್.ಪುರಂನ ನಿವಾಸವೊಂದರ ಮೇಲೆ ಬೃಹದಾಕಾರದ ಮರದ ಕೊಂಬೆ ಬಿದ್ದು ಸ್ಕೂಟರ್ ಜಖಂಗೊಂಡಿದೆ.
    ಅರಸೀಕೆರೆಯ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಹೊಳೆನರಸೀಪುರ, ಬೇಲೂರು, ಚನ್ನರಾಯಪಟ್ಟಣ ತಾಲ್ಲೂಕು ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ.

    ಆಲಿಕಲ್ಲು ಮಳೆಗೆ ಹರ್ಷ:
    ಅರಸೀಕೆರೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಬರದ ಬೇಗೆಯಿಂದ ಬಳಲಿದ್ದ ಬರದ ನಾಡಿಗೆ ಜೋರು ಮಳೆಯಾಗಿದ್ದು ರೈತಾಪಿ ವರ್ಗ ಸಂತಸಗೊಂಡಿದೆ. ಮಳೆ ಇಲ್ಲದೆ ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಕೆರೆಕಟ್ಟೆಗಳೆಲ್ಲ ಸಂಪೂರ್ಣ ಬತ್ತಿ ಹೋಗಿದ್ದು ಇದೇ ರೀತಿಯ ಮಳೆ ಮುಂದಿನ ದಿನಗಳಲ್ಲೂ ಸುರಿದರೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.

    ಸ್ಕೂಟರ್ ಜಖಂ:
    ಹಾಸನದಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ 4 ಗಂಟೆ ವರೆಗೆ ಸುರಿಯಿತು. ಜೋರು ಗಾಳಿ, ಸಿಡಿಲು ಆರ್ಭಟದೊಂದಿಗೆ ಶುರುವಾದ ಮಳೆಯ ಜೊತೆಗೆ ಗಾಳಿಯೂ ವೇಗವಾಗಿತ್ತು. ಕೆ.ಆರ್.ಪುರಂ 5ನೇ ವೃತ್ತದ ಎಂ.ವಿ.ಶಿವರಾಮ್ ಅವರ ಮನೆ ಮುಂದಿನ ಮರದ ಕೊಂಬೆ ಬಿದ್ದ ಪರಿಣಾಮ ಸ್ಕೂಟರ್ ಜಖಂಗೊಂಡಿದೆ. ಮರದ ಕೊಂಬೆ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಭಾರೀ ತೊಡಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts