More

    ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು ನಿರಾಳ

    ಕಾರವಾರ: ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ವಿಷಯದ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿ ನಡೆಯುವ ಮೂಲಕ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಮುಕ್ತಾಯವಾಗಿದೆ.

    ಶುಕ್ರವಾರ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಕೊಂಕಣಿ, ಹಿಂದಿ ಮುಂತಾದ ಭಾಷೆಗಳ ಪರೀಕ್ಷೆಗಳಿದ್ದವು. 4509 ಗಂಡುಮಕ್ಕಳು, 4565 ಹೆಣ್ಣು ಮಕ್ಕಳು ಸೇರಿ ಒಟ್ಟು 9074 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 349 ಅಭ್ಯರ್ಥಿಗಳು ಗೈರಾಗಿದ್ದರು.

    ಉತ್ತಮ ವ್ಯವಸ್ಥೆ: ಕರೊನಾ ಪರಿಸ್ಥಿತಿಯ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದೇ ಪರೀಕ್ಷೆಯನ್ನು ಕೈಗೊಳ್ಳುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಂಟೇನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳೂ ಕೂಡ ಇರುವುದು ಮುಖ್ಯವಾಗಿ ಆತಂಕಕ್ಕೆ ಕಾರಣವಾಗಿತ್ತು.

    ಸಾಕಷ್ಟು ಮಳೆಯಾಗುತ್ತಿರುವುದರಿಂದ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಆತಂಕಗೊಂಡಿದ್ದರು. ಆದರೆ, ಜಿಲ್ಲಾಡಳಿತದ ಸಹಕಾರದಿಂದ ಜಿಲ್ಲೆಯ ಕುಗ್ರಾಮ ಸೇರಿ ವಿವಿಧ ಭಾಗಗಳಿಗೆ 190ಕ್ಕೂ ಅಧಿಕ ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ಗಳನ್ನು ಬಿಡಲಾಗಿತ್ತು. ಸಾರಿಗೆ ಸಂಸ್ಥೆಯ ಸಿಬ್ಬಂದಿ ಭಯ ಬಿಟ್ಟು ಜವಾಬ್ದಾರಿಯಿಂದ ಎಲ್ಲೆಡೆ ತೆರಳಿ ವಿದ್ಯಾರ್ಥಿಗಳನ್ನು ಕರೆತಂದು, ವಾಪಸ್ ಕಳಿಸಿ ಮೆಚ್ಚುಗೆಗೆ ಪಾತ್ರರಾದರು.

    310 ಖಾಸಗಿ ವಿದ್ಯಾರ್ಥಿಗಳು: ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಗೋವಾದ ಎರಡು ಕನ್ನಡ ಮಾಧ್ಯಮದ 54 ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆದಿದ್ದಾರೆ. ಇಷ್ಟು ವರ್ಷ ಗೋವಾದ ವಿದ್ಯಾರ್ಥಿಗಳು ಕಾರವಾರದ ಉಳಗಾ ಹಾಸ್ಟೆಲ್​ಗೆ ಬಂದು ವಾಸ್ತವ್ಯ ಮಾಡಿ ಪರೀಕ್ಷೆ ಎದುರಿಸುತ್ತಿದ್ದರು. ಖಾಸಗಿ ವಿದ್ಯಾರ್ಥಿಗಳಿಗೆ ಕಾರವಾರ ಸೇಂಟ್ ಮೈಕಲ್ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. 261 ಅಭ್ಯರ್ಥಿಗಳು ಮೊದಲ ಬಾರಿಗೆ 49 ಅಭ್ಯರ್ಥಿಗಳು ಪುನರಾವರ್ತನೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಲಾಗಿತ್ತು. ಅವರಲ್ಲಿ ಪ್ರತಿ ದಿನ ಸರಾಸರಿ 250 ವಿದ್ಯಾರ್ಥಿಗಳು ಭಟ್ಕಳ, ಹೊನ್ನಾವರ ಹೀಗೆ ದೂರದ ಊರುಗಳಿಂದ ಬಂದು ಪರೀಕ್ಷೆ ಬರೆದಿದ್ದಾರೆ.

    600 ವಿದ್ಯಾರ್ಥಿಗಳು ಗೈರು: ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿಯಾದ ಒಟ್ಟು 10216 ವಿದ್ಯಾರ್ಥಿಗಳಲ್ಲಿ 600 ವಿದ್ಯಾರ್ಥಿಗಳು ಗೈರಾಗಿದ್ದು, 9616 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕಂಟೇನ್ಮೆಂಟ್ ಪ್ರದೇಶದಿಂದ ಬಂದು 27 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ 15 ವಿದ್ಯಾರ್ಥಿಗಳು, ವಲಸೆ ಬಂದ 367 ಮಕ್ಕಳು ಪರೀಕ್ಷೆ ಎದುರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts