More

    ಎಸ್ಸೆಸ್ಸೆಲ್ಸಿ ಅಧ್ಯಾಯವಾರು ಪ್ರಶ್ನೆಪತ್ರಿಕೆ ತಯಾರಿಸಿ

    ಕೋಲಾರ: ಕರೊನಾ ಮೂರನೇ ಅಲೆಯ ಆತಂಕದ ನಡುವೆ ಜೀವ, ಜೀವನ ಎರಡೂ ಮುಖ್ಯವೆಂದು ಅರಿತು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ 20,000 ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉತ್ತಮ ಹಾಗೂ ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಬೆಕು ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಶಿಕ್ಷಕರಿಗೆ ಕರೆ ನೀಡಿದರು.

    ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಎಸ್ಸೆಸ್ಸೆಲ್ಸಿ ಅಧ್ಯಾಯವಾರು ಪ್ರಶ್ನೆಪತ್ರಿಕಾ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಭೌತಿಕ ತರಗತಿ ಅಥವಾ 3ನೇ ಅಲೆ ಬಂದರೂ ಮಕ್ಕಳ ಕಲಿಕೆಗೆ ಆಧಾರವಾಗುವಂತೆ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರ ಸಿದ್ಧಪಡಿಸಿ, ಫಲಿತಾಂಶದಲ್ಲಿ ಪ್ರಥಮ ಸ್ಥಾನ ನಿಮ್ಮ ಗುರಿಯಾಗಿರಲಿ ಎಂದು ಕಿವಿಮಾತು ಹೇಳಿದರು.

    ಪ್ರಶ್ನೆಪತ್ರಿಕೆ ಎಲ್ಲ ಹಂತದ ಪ್ರತಿಭೆ ಇರುವ ಮಕ್ಕಳಿಗೂ ಅನುಕೂಲವಾಗುವಂತೆ ಸಿದ್ಧಪಡಿಸಬೇಕಾಗಿದೆ, ಮುಂದಿನ 210 ದಿನ ಮಾತ್ರ ಪರೀಕ್ಷೆಗೆ ಕಾಲವಿರುವುದರಿಂದ ಈ ಅವಧಿಯಲ್ಲಿ ಮಕ್ಕಳು ಸಾಧಕರಾಗಿ ಹೊರಹೊಮ್ಮಲು ಈ ಅಧ್ಯಾಯವಾರು ಪ್ರಶ್ನೆಪತ್ರಿಕೆ ದಾರಿದೀವಿಗೆಯಾಗಲಿ ಎಂದು ಆಶಿಸಿದರು.

    ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ಈ ಬಾರಿ ಅಧ್ಯಾಯವಾರು ಪ್ರಶ್ನೆಪತ್ರಿಕೆಗಳನ್ನು ಕೀ ಉತ್ತರದ ಸಮೇತ ಸಿದ್ಧಪಡಿಸಲಾಗುತ್ತಿದೆ, ಮಕ್ಕಳು ಕೋವಿಡ್ 3ನೇ ಅಲೆಯಿಂದ ಶಾಲೆಯಿಂದ ಹೊರಗುಳಿಯುವ ಸಂಕಷ್ಟ ಎದುರಾದರೂ ಅವರ ಕಲಿಕೆಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಿಶಿಷ್ಟತೆ ಕಾಪಾಡಲಾಗಿದೆ ಎಂದರು.

    ರೂಪಣಾತ್ಮಕ ಸಾಧನಾ ಪರೀಕ್ಷೆಗಳನ್ನು ಜಿಲ್ಲಾದ್ಯಂತ ಎಲ್ಲ ಪ್ರೌಢಶಾಲೆಗಳಲ್ಲೂ ಏಕರೂಪದಲ್ಲಿರುವಂತೆ ಮಾಡಲು ಅದರ ಪ್ರಶ್ನೆಪತ್ರಿಕೆ, ಚಟುವಟಿಕೆ ಪಟ್ಟಿ ಮಾಡಿಕೊಡಬೇಕು, ಮಕ್ಕಳ ಕೌಶಲ ಹೊರ ತೆಗೆಯಲು ರೂಪಣಾತ್ಮಕ ಚಟುವಟಿಕೆಗಳಿರಬೇಕು, ಸಮಾಜ ವಿಜ್ಞಾನದಲ್ಲಿನ ಇತಿಹಾಸದ ದಿನಾಂಕಗಳನ್ನು ಕೋಷ್ಠಕದಂತೆ ರಚಿಸಿ ಮಕ್ಕಳ ನೆನಪಿನಲ್ಲಿ ಉಳಿಯುವ ರೀತಿ ಸಿದ್ಧಪಡಿಸಿ, ವ್ಯಾಕರಣಾಂಶಗಳು, ಕವಿಕಾವ್ಯ ವಿಷಯಕ್ಕೂ ಒತ್ತು ಇರಲಿ, ಅನ್ವಯಿಕ ಪ್ರಶ್ನೆಗಳಿಗೆ ಒತ್ತು ನೀಡಿ, ನಿಮ್ಮ ಜ್ಞಾನ ಧಾರೆ ಎರೆದು ಸರ್ವರೀತಿಯಲ್ಲೂ ಮಕ್ಕಳ ಹಿತ ರಕ್ಷಣೆಗೆ ಒತ್ತು ನೀಡಿ. ಒಂದು ವಾರದೊಳಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿಕೊಡಿ ಎಂದು ಕೋರಿದರು.

    ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ರಾಷ್ಟ್ರೀಯ ಪಠ್ಯಕ್ರಮದ ನೆಲಗಟ್ಟನ್ನು ಅರಿಯದೇ ಏನೇ ಮಾಡಿದರೆ ವ್ಯರ್ಥ.ಮಕ್ಕಳಲ್ಲಿ ಅಂಕಗಳಿಕೆ ಜತೆಗೆ ಸಂಸ್ಕಾರ, ಬೆಳೆಸಬೇಕು, ಮಗುವಿಗೆ ಹೊರೆಯಾಗದಂತೆ ನಮ್ಮ ಪಠ್ಯಕ್ರಮ ಇರಬೇಕು. ವಿದ್ಯಾರ್ಥಿ ಸ್ನೇಹಿ ಪ್ರಶ್ನೆಪತ್ರಿಕೆ ಸಿದ್ದಗೊಳಿಸಿ ಎಂದರು

    ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ, ಶಶಿವಧನ, ವೆಂಕಟೇಶಪ್ಪ, ಸಿರಾಜುದ್ದೀನ್ ವಿಷಯವಾರು ಪ್ರಶ್ನೆಪತ್ರಿಕೆ ಸಿದ್ಧತೆಗೆ ಅಗತ್ಯ ಮಾರ್ಗದರ್ಶನ, ವಿಷಯವಾರು ಶಿಕ್ಷಕರಾದ ವಿದ್ಯಾಧರೆ, ಮಂಜುನಾಥ್, ಬಾಲಕೃಷ್ಣ, ನಾಗೇಶ್, ರಮೇಶ್, ಮತ್ತಿತರರು ಪ್ರಶ್ನೆಪತ್ರಿಕೆ ತಯಾರಿಕೆ ಕುರಿತು ಮಾರ್ಗದರ್ಶನ ನೀಡಿದರು.
    ಅರಾಭಿಕೊತ್ತನೂರು ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಇಸಿಒ ಅನ್ವರ್, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಕೆ.ಲೀಲಾ, ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಫರೀದಾ, ಹನುಮನಹಳ್ಳಿ ನಾಗರಾಜ್ ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts