More

    ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸಮಿತಿ ಸಭೆ- ಶಾಲಾವರಣ ಹದಗೆಡಿಸಿದರೆ ಕೇಸ್ ದಾಖಲಿಸಿ-ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

    ದಾವಣಗೆರೆ: ಗ್ರಾಮೀಣ ಸರ್ಕಾರಿ ಶಾಲೆಗಳ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವವರು ಹಾಗೂ ಅನೈರ್ಮಲ್ಯ ಸೃಷ್ಟಿಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಮತ್ತು ನಿಯಮಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಎರಡನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
    ಹರಿಹರದ ಕಾಂಪೌಂಡ್ ಶಿಕ್ಷಣ ಸಂಸ್ಥೆಯೊಂದರ ಬಳಿ ಪುಂಡರು ರಾತ್ರಿ ವೇಳೆ ಅಕ್ರಮ ಚಟುವಟಿಕೆ ನಡೆಸುವುದಲ್ಲದೆ ಅಲ್ಲಿನ ನೀರಿನ ಟ್ಯಾಂಕ್‌ಗಳಿಗೆ ಕಲ್ಲೆಸೆಯುತ್ತಿದ್ದಾರೆ ಎಂದು ರೆಹಮಾನ್ ದೂರಿದ ಹಿನ್ನೆಲೆಯಲ್ಲಿ ಡಿಸಿ ಸೂಚನೆ ನೀಡಿದರು.
    ಎಸ್ಸಿ-ಎಸ್ಟಿ ಜನರ ಮೇಲೆ ದೌರ್ಜನ್ಯವಾದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆ ಕಂಡುಬಂದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
    ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಅನೇಕ ವರ್ಷದಿಂದ ನನೆಗುದಿಗೆ ಬಿದ್ದಿದೆ ಎಂದು ಸಮಿತಿ ಸದಸ್ಯೆ ಉಮಾ ಹೇಳಿದಾಗ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಸಿ ಹೇಳಿದರು.
    * ಕೆಲಸ ಆಗಲ್ಲ, ಮನೆ ಕೊಡಿಸಬಹುದು
    ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಚರಂಡಿ ಹೂಳೆತ್ತುವಾಗ ವಿಷಗಾಳಿ ಸೇವಿಸಿ ಇತ್ತೀಚೆಗೆ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟಿದ್ದು ಅವರ ಕುಟುಂಬದವರಿಗೆ ಕೆಲಸ ಕೊಡಿಸುವಂತೆ ಸ್ಥಳೀಯರೊಬ್ಬರು ಆಗ್ರಹಿಸಿದರು. ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಕೆಲಸ ಕೊಡಿಸುವುದು ನಮ್ಮ ಹಂತದಲ್ಲಿಲ್ಲ. ಸಾಧ್ಯವಾದರೆ ಮನೆ ಇತರೆ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಜಿಪಂ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
    ಜಗಳೂರು ತಾಲೂಕಿನ ಅನೇಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಗೃಹದ ಕೊರತೆ ಮತ್ತು ಸಾರ್ವಜನಿಕರಿಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೋರಲಾಯಿತು.ನಗರದ ಜೆಎಚ್ ಪಟೇಲ್ ಬಡಾವಣೆಯಲ್ಲಿ ಮದ್ಯಪಾನ ಮಾಡುವವರ ಹಾವಳಿ ಹೆಚ್ಚಾಗಿದೆ ಎಂಬ ದೂರಿಗೆ ಸ್ಪಂದಿಸಿದ ಡಿಸಿ, ಸಿಸಿ ಕ್ಯಾಮರಾ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಸೂಚಿಸಿದರು.
    * ಆವರಗೆರೆ ಸ್ಮಶಾನ ರಸ್ತೆ ಬಿಡಿಸಿಕೊಡಿ
    ಆವರಗೆರೆ ಸ್ಮಶಾನ ರಸ್ತೆಗೆ ಹೋಗಲು ಮೊದಲಿದ್ದ ದಾರಿ ಇಲ್ಲ. ಸ್ಮಶಾನಕ್ಕೆ ಶವಗಳನ್ನು ಒಯ್ಯಲು ಸುತ್ತಿಕೊಂಡು ಹೋಗಬೇಕಿದೆ. ಈ ಬಗ್ಗೆ ಗಮನ ಹರಿಸಬೇಕು ಮುಖಂಡ ಆವರಗೆರೆ ವಾಸು ಮನವಿ ಮಾಡಿದರು.
    ಚೇತನ ಟೆಕ್ನೋ ಶಾಲೆ ಎದುರಿನಿಂದ ಆವರಗೆರೆ ಬೈಪಾಸ್‌ವರೆಗೂ ರಸ್ತೆ ವಿಭಜಕಗಳು ಅವೈಜ್ಞಾನಿಕವಾಗಿವೆ. ಬೀದಿದೀಪಗಳಿಲ್ಲದ್ದರಿಂದ ಅನೇಕರಿಗೆ ಅಪಘಾತವಾಗಿವೆ. ಸಿಮೆಂಟ್ ವಿಭಜಕ, ಬೀದಿದೀಪಗಳನ್ನು ಅಳವಡಿಸಬೇಕು. ಹೊಸಚಿಕ್ಕನಹಳ್ಳಿ ಬಳಿ ಐಗೂರು ರಸ್ತೆಯಲ್ಲಿ ಮಕ್ಕಳು ಶಾಲೆಗೆ ಹೋಗಲೂ ಸಹ ರಸ್ತೆ ಸಂಪರ್ಕ ಇಲ್ಲವಾಗಿದ್ದು ಸರಿಪಡಿಸಬೇಕು ಎಂದು ವಾಸು ಕೋರಿದರು.
    ಹರಳಯ್ಯ ನಗರ, ಎಪಿಎಂಸಿ ಬಳಿ ಎತ್ತಿನ ಸಂತೆ ಬಳಿ ವಾಸಿಸುತ್ತಿರುವ ಜನರಿಗೆ ಕೇವಲ ಕಾಳಜಿ ಕೇಂದ್ರ ತೆರೆದು ಆನಂತರ ಸಮಸ್ಯೆ ಮರೆಯಲಾಗುತ್ತಿದೆ. ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದರು. ಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿ ಪರಿಶೀಲನೆ ನಡೆಸಲು ಡಿಸಿ ಸೂಚಿಸಿದರು.
    * 31 ಪ್ರಕರಣ ಬಾಕಿ :
    ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ನಿಯಮದಡಿ ಜನವರಿ 2023 ಕ್ಕಿಂತ ಮೊದಲು ದಾಖಲಾದ 6 ಕೇಸ್ ತನಿಖಾ ಹಂತದಲ್ಲಿವೆ. 2023ರಿಂದ ಜೂ.27ರವರೆಗೆ 45 ಪ್ರಕರಣಗಳು ದಾಖಲಾಗಿದ್ದು, 31ರಲ್ಲಿ ತನಿಖೆ ಬಾಕಿ ಇದೆ. 45 ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಕೆಯಾಗಿವೆ. ಇದುವರೆಗೆ ದೌರ್ಜನ್ಯದ 77 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 92 ಸಂತ್ರಸ್ತರಿಗೆ 86.5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ ಸಭೆಗೆ ತಿಳಿಸಿದರು.
    ಎಸ್ಪಿ ಡಾ.ಕೆ. ಅರುಣ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್, ಸದಸ್ಯ ಬಾಬಣ್ಣ, ಅಣಜಿ ಅಂಜಿನಪ್ಪ, ಅರವಿಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts