More

    ಎಸ್ಪಿ ಕಚೇರಿ ಎಫ್‌ಡಿಎ ಬಂಧನ ; ಬೆಳಗಾವಿಯ ಸ್ನೇಹಿತೆ ಮನೆಯಲ್ಲಿ ಪತ್ತೆ

    ತುಮಕೂರು : ಪೊಲೀಸ್ ಸಿಬ್ಬಂದಿಯ ಪ್ರವಾಸ ಭತ್ಯೆಯಲ್ಲಿ ವಂಚನೆ ಮಾಡಿದ್ದ ಪ್ರಮುಖ ಆರೋಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಯಶಸ್ವಿನಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    2020ರ ಜನವರಿಯಲ್ಲಿ ಹೆಚ್ಚುವರಿ ಪೊಲೀಸ್ ಭತ್ಯೆ ಬಿಲ್ ತಯಾರಿಸಿ 20,50,970 ರೂ., ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ತಿಂಗಳಿಂದ ತಲೆಮರೆಸಿಕೊಂಡಿದ್ದ ಯಶಸ್ವಿನಿಯನ್ನು ಮಂಗಳವಾರ ರಾತ್ರಿ ಬೆಳಗಾವಿಯ ಸ್ನೇಹಿತೆಯ ಮನೆಯಲ್ಲಿ ಹೊಸ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

    5 ದಿನ ಪೊಲೀಸ್ ಕಸ್ಟಡಿಗೆ: ಆರೋಪಿ ಯಶಸ್ವಿನಿಯನ್ನು ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ಬುಧವಾರ ಸಂಜೆ 3ನೇ ಅಧಿಕ ಹಿರಿಯಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕುರುವತ್ತಪ್ಪ ಸೋಮಣ್ಣ ರೊಟ್ಟರ್ ಅವರ ಮುಂದೆ ಪೊಲೀಸರು ಹಾಜರುಪಡಿಸಿದ್ದು, ಜ.18ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

    ಈ ಪ್ರಕರಣದ ಮತ್ತೊಬ್ಬ ಆರೋಪಿ ಯಶಸ್ವಿನಿಯ ಸಂಬಂಧಿ ಕಿಶೋರ್‌ಕುಮಾರ್ ಜಾಮೀನು ಅರ್ಜಿಯನ್ನು ಸಹ ಜೆಎಂಎಫ್‌ಸಿ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿತ್ತು. ಕಿಶೋರ್ ಕುಮಾರ್ ಖಾತೆಗೆ ಯಶಸ್ವಿನಿ ಒಟ್ಟು 55 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದು ಈತನನ್ನು ವೈ.ಎನ್.ಹೊಸಕೋಟೆಯಲ್ಲಿ ಪೊಲೀಸರು ಬಂಧಿಸಿದ್ದರು. ತನ್ನ ಖಾತೆಯಲ್ಲಿದ್ದ ಹಣದ ಬಗ್ಗೆ ಸಮರ್ಪಕ ಉತ್ತರ ಕೊಡದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಹಿರಿಯ ಎಪಿಪಿ ಜ್ಯೋತಿ ಅವರು ವಾದ ಮಂಡಿಸಿದ್ದರು.

    ಸಿಇಎನ್‌ಗೆ ವರ್ಗಾವಣೆ  ಎಸ್ಪಿ ಕಚೇರಿಯಲ್ಲಿ ನಡೆದಿದ್ದ ದೊಡ್ಡ ವಂಚನೆ ಪ್ರಕರಣ ಇದಾಗಿದ್ದು, ಈ ಹೈಪ್ರೋಫೈಲ್ ಪ್ರಕರಣವನ್ನು ಸಿಇಎನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. 20 ಲಕ್ಷಕ್ಕೂ ಹೆಚ್ಚು ಹಣವನ್ನು ಗೂಗಲ್ ಪೇ ಮೂಲಕ ತನ್ನ ಖಾತೆಗೆ ಯಶಸ್ವಿನಿ ವರ್ಗಾಯಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದರು. ಇದರಲ್ಲಿ ಹಲವು ಕಾಣದ ಕೈಗಳಿವೆ. ಅಲ್ಲದೆ, ಇತ್ತೀಚೆಗೆ ಆರೋಪಿ ನಿರೀಕ್ಷಣಾ ಜಾಮೀನು ವಜಾ ಮಾಡಿದ್ದ ಸಂದರ್ಭದಲ್ಲಿ ನ್ಯಾಯಾಲಯವು ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

    ಕಣ್ಣಾಮುಚ್ಚಾಲೆ ಆಟ  2020ರ ಜನವರಿಯಲ್ಲಿ ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆ ಬಿಲ್ ಅನ್ನು ಹೆಚ್ಚುವರಿಯಾಗಿ ತಯಾರಿಸಿ ಎಫ್‌ಡಿಎ ಯಶಸ್ವಿನಿ, ಜಿಲ್ಲಾ ಖಜಾನೆಗೆ ಖಜಾನೆ-2ರ ಮೂಲಕ ಸಲ್ಲಿಸಿದ್ದರು. ಈ ಹೆಚ್ಚುವರಿ 20,50,970 ರೂ., ಟಿಎ ಬಿಲ್‌ನ ಮೊತ್ತವನ್ನು ತನ್ನ ಸ್ವಂತ ಖಾತೆಗೆ ಪೊಲೀಸ್ ಸಿಬ್ಬಂದಿ ಮೂಲಕ ಗೂಗಲ್‌ಪೇ ಮೂಲಕ ಹಾಕಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದರು. ಈ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್ಪಿ ಕಚೇರಿ ಆಡಳಿತಾಧಿಕಾರಿ ಜುಲೈನಲ್ಲಿ ಹೊಸ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನಿಂದ ಯಶಸ್ವಿನಿ ತಲೆಮರೆಸಿಕೊಂಡಿದ್ದರು. ಈ ಕಣ್ಣಾಮುಚ್ಚಾಲೆ ಆಟದಲ್ಲಿ ಪೊಲೀಸರು ಆಕೆಯ ಬೆನ್ನಿಗೆ ನಿಂತಿದ್ದರು ಎನ್ನಲಾಗಿದೆ. ಮಾಧ್ಯಮದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ವರದಿಯಾದ ಬಳಿಕ ಆರೋಪಿಯ ಪತ್ತೆಗೆ ಪೊಲೀಸರು ಮುಂದಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts