More

    ಎಸ್ಐಸಿ ಕ್ವಾರಂಟೈನ್ ಸೆಂಟರ್ ಸ್ಥಾಪನೆ

    ಬಾಬುರಾವ ಯಡ್ರಾಮಿ ಕಲಬುರಗಿ
    ರೆಡ್ ಝೋನ್ನಲ್ಲಿರುವ ನಗರದಲ್ಲಿ ಸಮುದಾಯ ಮಟ್ಟದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಶಂಕಿತರನ್ನು ಮನೆ ಬದಲಿಗೆ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲು ವಿಶೇಷ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ.
    ಈಗಾಗಲೇ ಇಎಸ್ಐಸಿ ಮತ್ತು ಜಿಮ್ಸ್ಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಅದರ ಬೆನ್ನಲ್ಲೇ ಸೂಪರ್ ವಿಷನ್ ಐಸೋಲೇಷನ್ ಕೇಂದ್ರ (ಎಸ್ಐಸಿ) ಮತ್ತು ವಿಶೇಷ ಕ್ವಾರಂಟೈನ್ ಕೇಂದ್ರಗಳನ್ನು ಶುರು ಮಾಡಲಿದ್ದು, ಸೋಂಕು ಲಕ್ಷಣ ಹೊಂದಿದವರನ್ನು ಈ ಕೇಂದ್ರಗಳಲ್ಲಿರಿಸಿ ಚಿಕಿತ್ಸೆ ಜತೆಗೆ ನಿಗಾ ವಹಿಸಲು ಸಹಕಾರಿ ಆಗಲಿದೆ.
    ಸುಮಾರು 5000 ಹಾಸಿಗೆ ಇರುವಂತೆ ವಿಶೇಷ ಕ್ವಾರಂಟೈನ್ ಸೆಂಟರ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ ನಗರದ ಸರ್ಕಾರಿ ಯೂನಾನಿ ಆಸ್ಪತ್ರೆಯನ್ನು ಮಾರ್ಪಡಿಸಲಾಗಿದೆ. ಇನ್ನುಳಿದಂತೆ ಬುದ್ಧ ವಿಹಾರದ ಪಾಲಿ ಹೌಸ್, ಏಷಿಯನ್ ಮಾಲ್ ಬಳಿಯ ಬಿಸಿಎಂ ವಸತಿ ಶಾಲೆ, ಸೇಡಂ ರಸ್ತೆಯ ಹೊಸ ಹಾಸ್ಟೇಲ್ ಕಟ್ಟಡ, ಜೇವರ್ಗಿ ರಸ್ತೆಯ ಲೋಕೋಪಯೋಗಿ ಇಲಾಖೆಗೆ ಸೇರಿದ ಹೊಸ ವಸತಿ ಸಮುಚ್ಛಯ, ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಹೀಗೆ 28 ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿವೆ.
    ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಶರತ್ ಬಿ. ಸೂಚನೆಯಂತೆ ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಸ್ಟೆಲ್ಗಳನ್ನು ಗುರುತಿಸಿದ್ದಾರೆ. ಅಲ್ಲದೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಬಹುತೇಕ ಎಲ್ಲ ಹೊಸ ಕಟ್ಟಡಗಳಾಗಿವೆ. ಅಲ್ಲಿ ಬೇರೆ ಹಾಸ್ಟೆಲ್ಗಳಲ್ಲಿರುವ ಮಂಚ ಮತ್ತು ಹಾಸಿಗೆಗಳನ್ನು ರವಾನಿಸಿ ಬೆಡ್ಗಳನ್ನು ಸಿದ್ಧಪಡಿಸಲಾಗುತ್ತಿದೆ.
    ವಾಡಿಯಲ್ಲಿ ಎರಡು ವರ್ಷದ ಮಗುವಿಗೆ ಸೋಂಕು ಕಾಣಿಸಿದ್ದು, ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಇದು ಸಮುದಾಯ ಹರಡುವಿಕೆಯೇ ಎಂಬ ಆತಂಕ ಕಾಡಲು ಶುರುವಿಟ್ಟಿದೆ. ಅಂತಲೇ ಶಂಕಿತರು ಕಂಡು ಬಂದಲ್ಲಿ ಹೋಂ ಕ್ವಾರಂಟೈನ್ ಸಾಧ್ಯವಾಗದವರನ್ನು ಈ ಕೇಂದ್ರದಲ್ಲಿ 15 ದಿನ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಪಾಸಿಟಿವ್ ಇದ್ದವರಿಗೆ ಕೃತಕ ಉಸಿರಾಟ ಯಂತ್ರದ (ವೆಂಟಿಲೇಟರ್) ಅಗತ್ಯ ಬೀಳದಿದ್ದರೆ ಎಸ್ಐಸಿ ಕೇಂದ್ರದಲ್ಲಿರಿಸಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಪರಿಣತರ ಸಲಹೆಯಂತೆ ಈ ಪ್ಲ್ಯಾನ್​ ರೂಪಿಸಲಾಗಿದೆ.

    ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಎರಡು ಕೋವಿಡ್ ಆಸ್ಪತ್ರೆಗಳ ಜತೆಗೆ ಹೆಚ್ಚುವರಿಯಾಗಿ 5000 ಹಾಸಿಗೆ ಸಾಮಥ್ರ್ಯದ ವಿಶೇಷ ಕ್ವಾರಂಟೈನ್ ಸೆಂಟರ್ ಮತ್ತು ಎಸ್ಐಸಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಹಾಸ್ಟೆಲ್ ಇತರ ಸರ್ಕಾರಿ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತದೆ.
    | ಶರತ್ ಬಿ. ಜಿಲ್ಲಾಧಿಕಾರಿ


    ವಿಶೇಷ ಕ್ವಾರಂಟೈನ್ ಸೆಂಟರ್ ಮತ್ತು ಎಸ್ಐಸಿ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆಯಂತೆ ಗುರುತಿಸಲಾಗಿದೆ. ಆ ಕಟ್ಟಡಗಳ ಕೋಣೆಗಳಲ್ಲಿ ಹಾಸ್ಟೆಲ್ಗಳಲ್ಲಿರುವ ಬೆಡ್ಗಳನ್ನು ತಂದು ಹಾಕುವ ಕೆಲಸ ನಡೆದಿದೆ. ಬಕೆಟ್, ಮಗ್ ಇತರ ಅಗತ್ಯವಿರುವ ವಸ್ತುಗಳನ್ನು ಕಲ್ಪಿಸಲಾಗುತ್ತಿದೆ. ಸುಮಾರು 5000 ಹಾಸಿಗೆ ಹೊಂದಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
    | ರಮೇಶ ಸಂಗಾ ಬಿಸಿಎಂ ಜಿಲ್ಲಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts