More

    ಎವಿಕೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ- ಜೀವನಶೈಲಿ ಬದಲಾವಣೆಗೆ ಸಂಕಲ್ಪ ಮಾಡಿ- ಡಾ.ಪ್ರಭಾ

    ದಾವಣಗೆರೆ: ವಿದ್ಯಾರ್ಥಿನಿಯರು ಜೀವನಶೈಲಿ ಬದಲಾವಣೆಗೆ ಈಗಿನಿಂದಲೇ ಸಂಕಲ್ಪ ಮಾಡಬೇಕು. ದಿನಚರಿಯಲ್ಲಿ ಕೆಲ ಸಮಯ ಧ್ಯಾನಕ್ಕೆ ಮೀಸಲಿಡಬೇಕು. ವರ್ಷಕ್ಕೆರಡರಂತೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮೊದಲಾದವರ ಆತ್ಮಚರಿತ್ರೆ ಹಾಗೂ ಸಾಧಕರ ಜೀವನ ಚರಿತ್ರೆ ಪುಸ್ತಕಗಳನ್ನು ಓದಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
    ನಗರದ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಂಜಿರ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಜತೆಗೆ ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು, ಇದರಿಂದ ನಮ್ಮ ವರ್ತನೆಗಳ ಬಗ್ಗೆ ತಿಳಿವಳಿಕೆ, ನಮ್ಮ ತಪ್ಪುಗಳ ಮನವರಿಕೆ ಹಾಗೂ ಸ್ವಯಂ ಜಾಗೃತಿ ಕಲ್ಪನೆ ಮೂಡಲಿದೆ. ಹೀಗಾಗಿ ಕನಿಷ್ಟ 21 ದಿನದ ಮಟ್ಟಿಗೆ ಧ್ಯಾನ ಮಾಡಿಯೇ ಮುಂದಿನ ಕೆಲಸ ನಿರ್ವಹಿಸುತ್ತೇನೆಂಬ ಸಂಕಲ್ಪ ಮಾಡಿ ಎಂದು ಹೇಳಿದರು.
    ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನದ ಜತೆಯಲ್ಲೇ ಊಟ- ಆಟದ ಕಡೆಗೂ ಗಮನ ಹರಿಸಬೇಕು. ಅಕಾಡೆಮಿಕ್ ಶಿಕ್ಷಣ ಪೂರೈಸುವುದುದೆಂದರೆ ಕೇವಲ ಓದೇ ಅಲ್ಲ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಬೇಕು. ಹೊಸ ಆಲೋಚನೆಗಳೊಂದಿಗೆ ನಿಮ್ಮ ಊಟವನ್ನು ನೀವೇ ಗಳಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
    ತಿಂಡಿ ಸೇವಿಸದೇ ಕಾಲೇಜಿಗೆ ಬಂದರೆ ಕಲಿಕೆಯಲ್ಲಿ ಏಕಾಗ್ರತೆ ಬರುವುದಿಲ್ಲ. ಕ್ರೀಡೆಗಳಲ್ಲಿ ಭಾಗಿಯಾದರೆ ನಾಯಕತ್ವದ ಗುಣಗಳನ್ನು ಅವು ಕಲಿಸಿಕೊಡಲಿವೆ. ಎಲ್ಲ ಜೀವನದಲ್ಲೂ ಶಿಸ್ತು, ಪ್ರಾಮಾಣಿಕತೆ, ಆತ್ಮವಿಶ್ವಾಸ, ಕರುಣೆ ಮೊದಲಾದ ಮೌಲ್ಯಗಳು ಮುಖ್ಯ. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಇವು ಅಗತ್ಯವಿವೆ. ಪ್ರತಿಯೊಬ್ಬರೂ ತಂತಮ್ಮ ಭವಿಷ್ಯದ ಬಗ್ಗೆ ಆಲೋಚಿಸಬೇಕು ಎಂದು ತಿಳಿಸಿದರು.
    ಎವಿಕೆ ಕಾಲೇಜಿನಲ್ಲಿ 1200 ವಿದ್ಯಾರ್ಥಿನಿಯರು ಓದುತ್ತಿರುವುದು ಹೆಮ್ಮೆಯ ವಿಚಾರ. ಒಬ್ಬ ಹೆಣ್ಣು ಕಲಿತರೆ ಇಡೀ ಮನೆಯನ್ನೇ ಬದಲಾವಣೆ ಮಾಡಬಹುದು. ಹೀಗಾಗಿ ಎಲ್ಲ ವಿದ್ಯಾರ್ಥಿನಿಯರ ಕುಟುಂಬಗಳು ಕೂಡ ಬದಲಾಗಲಿವೆ ಎಂದು ಹೇಳಿದರು. ರ‌್ಯಾಂಕ್ ವಿಜೇತರಾದ ಪಲ್ಲವಿ ಚವ್ಹಾಣ್, ಕೆ.ಎಸ್.ಸ್ನೇಹಾ, ಪಿ.ಕೆ.ಅಂಕಿತಾ, ಸಂಜನಾ ಅವರನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್, ಐಕ್ಯುಎಸಿ ಸಂಯೋಜಕ ಪ್ರೊ.ಆರ್.ಆರ್. ಶಿವಕುಮಾರ್, ಎವಿಕೆ ಪಪೂ ಕಾಲೇಜಿನ ಪ್ರಾಚಾರ್ಯ ರವಿ ಬಣಕಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ರಣಧೀರ, ಸಾಂಸ್ಕೃತಿಕ ಸಮಿತಿ ಸಂಯೋಜಕಿ ಡಾ.ಆರ್.ಜಿ.ಕವಿತಾ, ವಿದ್ಯಾರ್ಥಿ ಸಂಘದ ವಿವಿಧ ವಿಭಾಗದ ಕಾರ್ಯದರ್ಶಿಗಳಾದ ಎಂ. ಸಂಗೀತಾ, ಎಚ್.ಎಚ್.ಸ್ಮಿತಾ, ಟಿ. ಐಶ್ವರ್ಯಾ ಇದ್ದರು. ಟಿ.ಎಚ್.ಅಂಕಿತಾ ಸ್ವಾಗತಿಸಿದರು. ವಿದ್ಯಾ, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ. ಲಕ್ಷ್ಮೀ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts