More

    ಎಲ್ಲಾದ್ರೂ ಚಿರತೆ ಕಂಡಿರಾ?, ಅರಣ್ಯ ಅಧಿಕಾರಿಗಳಿಂದ ಹುಡುಕಾಟ, ಜಾಡು ಹಿಡಿಯಲಾಗದೆ ಸಿಬ್ಬಂದಿ ಹೈರಾಣ

    ಬೆಂ.ಗ್ರಾಮಾಂತರ/ಚನ್ನರಾಯಪಟ್ಟಣ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಎಲ್ಲಿ ನೋಡಿದರೂ ಚಿರತೆಯದ್ದೇ ಸದ್ದು. ಅಲ್ಲಿ ಚಿರತೆ ಕಂಡಿತ್ತು, ಇಲ್ಲಿ ಕಂಡಿತು, ರಸ್ತೆ ದಾಟುತ್ತಿತ್ತು. ಅಯ್ಯೋ, ಒಂದಲ್ಲಾ ಎರಡೆರಡು ಇವೆ, ಮರಿಗಳೂ ಇವೆ, ನಾವೇ ನೋಡ್ದು.. ಎಂಬ ಮಾತುಗಳು ಗಿರಕಿಹೊಡೆಯುತ್ತಿವೆ. ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ‘ಚಿರತೆಯನ್ನು ನೀವು ಕಂಡಿರಾ, ನೀವು ಕಂಡಿರಾ’ ಎಂದು ಹುಡುಕಾಡುತ್ತಿದ್ದಾರೆ. ಆದರೆ ಚಿರತೆ ಜಾಡು ಮಾತ್ರ ಪತ್ತೆಯಾಗುತ್ತಿಲ್ಲ.
    ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಸಂಚಾರದ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ. ಚಿರತೆ ಓಡಾಡುವುದನ್ನು ನೋಡಿದ್ದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ. ಏತನ್ಮಧ್ಯೆ ಬೋನು ಇಟ್ಟು ಚಿರತೆ ಆಗಮನಕ್ಕೆ ಕಾದುಕುಳಿತ ಅರಣ್ಯ ಇಲಾಖೆ ಚಿರತೆ ಹೆಜ್ಜೆ ಗುರುತು ಪತ್ತೆಹಚ್ಚುವುದಕ್ಕೂ ಸಾಧ್ಯವಾಗುತ್ತಿಲ್ಲ.

    ಮಳೆಯಿಂದ ಹೆಜ್ಜೆಗುರುತು ನಾಪತ್ತೆ: ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಹೊಸನಲ್ಲೂರು ಹಾಗೂ ಚಿಕ್ಕಹೊಸಹಳ್ಳಿ ರಸ್ತೆಯಲ್ಲಿ ಚಿರತೆಗಳ ಓಡಾಟದ ಬಗ್ಗೆ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಳೆದೆರಡು ದಿನಗಳಿಂದ ಸ್ಥಳದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿರತೆ ಹೆಜ್ಜೆ ಗುರುತು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ನಲ್ಲೂರು ಗ್ರಾಮದ ಕೋಟೆ ಗಂಗಾದೇವಿ ದೇವಾಲಯ ಸಮೀಪದ ಹುಣಸೇ ತೋಪಿನಲ್ಲಿಯೂ ಚಿರತೆ ಕಾಣಿಸಿಕೊಂಡಿರುವ ಸುದ್ದಿ ಹಬ್ಬಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

    ಮೇಕೆ ಮಾಯ!: ರಾತ್ರಿಯ ವೇಳೆ ಆಹಾರ ಹುಡುಕಿಕೊಂಡು ನಲ್ಲೂರು ಬಳಿಯ ಹುಣಸೆತೋಪಿಗೆ ಬಂದಿರಬಹುದು. ಬೆಳಗಾಗುತ್ತಿದ್ದಂತೆ ಜನರ ಓಡಾಟದಿಂದ ವಿಚಲಿತವಾಗಿ, ಆವತಿ ಬೆಟ್ಟದ ಕಡೆ ತೆರಳಿರಬಹುದು ಎಂಬುದು ಅಧಿಕಾರಿಗಳು ಶಂಕೆಯಾಗಿದೆ. ಏತನ್ಮಧ್ಯೆ ಆವತಿಯಲ್ಲಿ ಮೇಕೆಯೊಂದು ನಾಪತ್ತೆಯಾಗಿದ್ದು, ಚಿರತೆಗಳೇ ಹೊತ್ತೊಯ್ದಿರಬಹುದೆಂಬುದು ಗ್ರಾಮಸ್ಥರ ಅನುಮಾನವಾಗಿದೆ.

    ಎರಡೂ ತಾಲೂಕುಗಳ ನಡುವೆ ಸಂಚಾರ: ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕು ವ್ಯಾಪ್ತಿಯ ಕಾಡುಗಳಲ್ಲಿ ಚಿರತೆಗಳು ಸಂಚರಿಸುತ್ತಿವೆ ಎಂಬ ಮಾಹಿತಿ ಇದೆ. ಆವತಿ ಬೆಟ್ಟದ ಹಲವು ಕಡೆಗಳಲ್ಲಿ ಬೋನುಗಳನ್ನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದರೂ ಪ್ರಯೋಜನವಾಗಿಲ್ಲ. ಇದರ ನಡುವೆ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಚಿರತೆ ಸಂಚಾರದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಜನರು ಭಯಭೀತರಾಗುವುದು ಬೇಡ, ಚಿರತೆ ಸೆರೆಗೆ ಸಕಲ ಪ್ರಯತ್ನ ಮಾಡಲಾಗುತ್ತಿದೆ. ನಲ್ಲೂರು ಭಾಗದಲ್ಲೂ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದ್ದಾರೆ. ಆದರೂ ಜನತೆ ಎಚ್ಚರಿಕೆಯಿಂದಿರಬೇಕು. ಎಲ್ಲಿಯಾದರೂ ಚಿರತೆ ಚಲನವನ ಕಂಡುಬಂದರೆ ಮಾಹಿತಿ ನೀಡಬೇಕು.
    ಧನಲಕ್ಷ್ಮೀ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts