More

    ಎಲ್ಲರೂ ತಪ್ಪದೆ ಮತದಾನ ಮಾಡಬೇಕು : ತಾಪಂ ಇಒ ಸುಮಲತಾ

    ರಾಣೆಬೆನ್ನೂರ: ಪ್ರಜಾಪ್ರಭುತ್ವ ಬಲಪಡಿಸಬೇಕಾದರೆ ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ತಾಪಂ ಇಒ ಸುಮಲತಾ ಎಸ್.ಪಿ. ಹೇಳಿದರು.
    ತಾಲೂಕಿನ ಕಜ್ಜರಿ ಗ್ರಾಪಂ ವ್ಯಾಪ್ತಿಯ ಹನುಮನಮಟ್ಟಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಧಾನಸಭೆ ಚುನಾವಣೆಯ 2023ರ ಮತದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
    ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನವೆಂಬುದು ಮಹತ್ವದ ಪಾತ್ರ ವಹಿಸುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿಯ ಆಯ್ಕೆಯ ಹಕ್ಕು ನಿಮಗೆ ನೀಡಲಾಗಿದೆ. ಆದ್ದರಿಂದ ಯಾವುದೇ ಆಸೆ, ಆಮಿಷ, ಪ್ರಭಾವಕ್ಕೆ ಒಳಗಾಗದೆ ತಮ್ಮ ಪವಿತ್ರವಾದ ಮತವನ್ನು ಚಲಾಯಿಸಬೇಕು ಎಂದರು.
    ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಮಾತನಾಡಿ, ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದರೂ ಮತದಾರರು ಮತದಾನದಿಂದ ಹೊರಗುಳಿಯುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಪ್ರಜ್ಞಾವಂತ ಮತದಾರರು ತಮ್ಮ ಮತವನ್ನು ವ್ಯರ್ಥ ಮಾಡದೆ ಮತದಾನ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.
    ಗ್ರಾಪಂ ಪಿಡಿಒ ರವಿಕುಮಾರ ಎಚ್. ಪ್ರತಿಜ್ಞಾವಿಧಿ ಬೋಧಿಸಿದರು.
    ಗ್ರಾಪಂ ಅಧ್ಯಕ್ಷ ಸುರೇಶ ಮೋಟೆಬೆನ್ನೂರ, ಐಇಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ, ಮಾರುತಿ ದೊಡ್ಮನಿ, ಸಂತೋಷ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts