More

    ಎಲೆಚುಕ್ಕೆ ರೋಗ ಕಡೆಗಣಿಸಿದರೆ ಅಡಕೆ ತೋಟಗಳೇ ನಾಶವಾಗುವ ಅಪಾಯ: ಬಿ.ಎಸ್.ಮಹಾಬಲೇಶ್ವರ ಬೇಳೂರು

    ಸಾಗರ: ಎಲೆಚುಕ್ಕೆ ರೋಗ ಕಡೆಗಣಿಸಿದರೆ ಇಳುವರಿ ಕ್ಷೀಣಿಸಿ, ಅಡಕೆ ತೋಟಗಳೇ ನಾಶವಾಗುವ ಅಪಾಯವಿದೆ ಎಂದು ಸಿದ್ದಾಪುರದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ಮಹಾಬಲೇಶ್ವರ ಬೇಳೂರು ಹೇಳಿದರು.
    ಸೋಮವಾರ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಡಚಾದ್ರಿ ಅಡಕೆ ಸೌಹಾರ್ದ ಸಹಕಾರಿ ಸಂಘ ಏರ್ಪಡಿಸಿದ್ದ ಕೊಡಚಾದ್ರಿ ಸಹಕಾರಿ ಸಮಾವೇಶದಲ್ಲಿ ಅತಿವೃಷ್ಟಿ ಕಾಲದಲ್ಲಿ ಭಾಗಾಯ್ತು ನಿರ್ವಹಣೆ ಕುರಿತು ಮಾತನಾಡಿ, ಈ ರೋಗ ಅಡಕೆ ಸಸಿ ಮತ್ತು ಸಣ್ಣ ಮರಗಳಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣುತ್ತದೆ. ಕೆಳಭಾಗದ ಒಂದೆರಡು ಸೋಗೆಗಳಲ್ಲಿ ಚುಕ್ಕೆಗಳ ರೀತಿ ಕಾಣಿಸಿಕೊಂಡು ನಂತರ ಇಡೀ ಗಿಡವನ್ನೇ ನುಂಗಿ ಬಿಡುತ್ತದೆ. ಗಾಳಿ ಮೂಲಕ ಹರಡುವ ಕಾರಣ ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡಬೇಕು ಎಂದರು.
    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು, ಸಾಗರ ತಾಲೂಕಿನ ಕರೂರು, ಭಾರಂಗಿ ಪ್ರದೇಶ, ಚಿಕ್ಕಮಗಳೂರಿನ ಶೃಂಗೇರಿ ಮತ್ತು ಕಳಸ, ಮಡಿಕೇರಿಯ ಸಂಪಾಜೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಪ, ಕಾಸರಗೋಡು ಒಳಗೊಂಡಂತೆ ಕೇರಳ ಮತ್ತು ತಮಿಳುನಾಡಿನವರೆಗೂ ಎಲೆಚುಕ್ಕೆ ರೋಗ ಹರಡಿದೆ. ಈಗಾಗಲೇ ಇಲಾಖೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ರೈತರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ ಎಂದರು.
    ಅಡಕೆ ನಮ್ಮ ದೇಶದ ವಾಣಿಜ್ಯ ಬೆಳೆಯಾಗಿದೆ. ಪ್ರಪಂಚದ ಶೇ.62 ಅಡಕೆ ಕ್ಷೇತ್ರ ಮತ್ತು ಶೇ.60 ಉತ್ಪಾದನೆ ಗುರುತಿಸಲಾಗಿದ್ದು ಅದರಲ್ಲಿ ಭಾರತದಲ್ಲಿ 4.16 ಲಕ್ಷ ಹೆಕ್ಟೇರ್‌ಗಳಿಂದ 5.2 ಲಕ್ಷ ಟನ್ ಉತ್ಪಾದನೆ ಅಂದಾಜಿಸಲಾಗಿದೆ. ಕರ್ನಾಟಕ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚು ಅಡಕೆ ಕೃಷಿ ಆವರಿಸಿಕೊಂಡಿದೆ ಎಂದು ತಿಳಿಸಿದರು.
    ಅಡಕೆಗೆ 11 ರೋಗಗಳ ಕಾಟ: ಅಡಕೆಗೆ ಕೊಳೆರೋಗ, ಅಣಬೆರೋಗ, ಸುಳಿಕೊಳೆ, ಸಿಂಗಾರ ಒಣಗುವುದು, ಎಲೆಚುಕ್ಕಿರೋಗ, ಕಾಂಡಸೋರುವುದು, ಹಳದಿ ಎಲೆರೋಗ ಹೀಗೆ ಹನ್ನೊಂದು ರೋಗಗಳನ್ನು ಗುರುತಿಸಲಾಗಿದೆ. ಇದರ ಜತೆಯಲ್ಲಿ ಕೀಟಗಳು ಮತ್ತು ಪ್ರಾಣಿಗಳು ಅಡಕೆಯ ಇಳುವರಿಯನ್ನು ಹಾಳುಮಾಡುತ್ತವೆ ಎಂದು ಬಿ.ಎಸ್.ಮಹಾಬಲೇಶ್ವರ ಬೇಳೂರು ಹೇಳಿದರು. ಅವುಗಳಲ್ಲಿ ರಸಹೀರುವಕೀಟ, ಜೇಡ ಮತ್ತು ಸಾಲಿಂಗ, ಬೇರುಹುಳು, ಜಂತುಗಳು, ಬಸವನಹುಳು, ಕಾಡುಪ್ರಾಣಿಗಳ ಹಾವಳಿ ತೋಟಗಳನ್ನು ನಾಶಮಾಡುತ್ತವೆ. ಇವೆಲ್ಲದಕ್ಕೂ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಬೆಳೆಗಾರರು ಸದಾ ಸನ್ನದ್ಧರಾಗಿರಬೇಕು. ತಮಗೆ ಅರಿವಿಲ್ಲದೆ ಹೋದರೆ ಇಲಾಖೆಯ ಮಾಹಿತಿ ಪಡೆದು ತೋಟಗಳು ಈ ರೋಗಗಳಿಂದ ಗುಣಮುಕ್ತಗೊಳ್ಳಲು ಸಹಕಾರ ಪಡೆಯಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts