More

    ಎಲೆಚುಕ್ಕೆ ರೋಗ ಔಷಧ ವಿತರಣೆಯಲ್ಲಿ ಭ್ರಷ್ಟಾಚಾರ; ಅನುದಾನ ಬಿಡುಗಡೆಗೂ ಮುನ್ನ ಸನ್ಮಾನ ಏಕೆ?: ತೀ.ನ.ಶ್ರೀನಿವಾಸ್ ಪ್ರಶ್ನೆ

    ಸಾಗರ: ಅಡಕೆ ಸಂಕಷ್ಟಕ್ಕೆ ಇನ್ನೂ 10 ಕೋಟಿ ರೂ. ಅನುದಾನ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಬಿಜೆಪಿ ಹಿಡಿತದಲ್ಲಿರುವ ಕೆಲವು ಅಡಕೆ ಸಹಕಾರ ಸಂಘಗಳು ಲೋಕಸಭಾ ಸದಸ್ಯರು ಹಾಗೂ ಸಾಗರ ಶಾಸಕರನ್ನು ಸನ್ಮಾನಿಸಿರುವುದು ಎಷ್ಟು ಸರಿ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
    ಅಡಕೆ ಟಾಸ್ಕ್‌ಪೋರ್ಸ್ ಮೂಲಕ ಅಡಕೆ ಹಾನಿಕಾರಕವಲ್ಲ ಎನ್ನುವ ಸಂಶೋಧನೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿಗೆ 38 ಲಕ್ಷ ರೂ. ನೀಡಲಾಗಿತ್ತು. ಒಂದು ವರ್ಷವಾದರೂ ವರದಿ ಬಂದಿಲ್ಲ. ಖಾಸಗಿ ಸಂಸ್ಥೆಗಳು ತನಿಖೆ ನಡೆಸಿದರೆ ಅದು ಉಪಯೋಗಕ್ಕೆ ಬರುವುದಿಲ್ಲ. ನ್ಯಾಯಾಲಯಗಳು ಇದನ್ನು ಒಪ್ಪುವುದಿಲ್ಲ ಎನ್ನುವ ಸತ್ಯವನ್ನು ನಮ್ಮನ್ನಾಳುವವರು ಹೊಂದಿರದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಎಲೆಚುಕ್ಕೆ ರೋಗಕ್ಕೆ ವಿತರಣೆ ಮಾಡುತ್ತಿರುವ ಔಷಧದಲ್ಲಿ ಭ್ರಷ್ಟಾಚಾರ ನಡೆದಿದೆ. 1300 ರೂ.ಗೆ ಸಿಗುವ ಔಷಧಕ್ಕೆ 4 ಸಾವಿರ ರೂ. ಖರ್ಚು ಮಾಡಲಾಗಿದೆ. ಭೂತಾನ್ ಅಡಕೆ ಭಾರತಕ್ಕೆ ಬಂದಿದ್ದರಿಂದ ಅಡಕೆ ಧಾರಣೆ 6 ಸಾವಿರ ರೂ. ಕಡಿಮೆಯಾಗಿದೆ. 2019ರಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಅದಕ್ಕೆ ಪರಿಹಾರ ಕಲ್ಪಿಸಲು ಬಿಜೆಪಿ ಸರ್ಕಾರ, ಸಂಸದರು, ಶಾಸಕರಿಂದ ಸಾಧ್ಯವಿಲ್ಲ. ಈಗ ಸಂಶೋಧನೆ ನೆಪ ಹೇಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲೆಚುಕ್ಕೆ ರೋಗದಿಂದ ನಾಶವಾಗಿರುವ ಪ್ರತಿ ಎಕರೆ ತೋಟಕ್ಕೆ 5 ಲಕ್ಷ ರೂ. ಪರಿಹಾರ ಕೊಡಬೇಕು. ಅಡಕೆ ಹಾನಿಕಾರವಲ್ಲ ಎನ್ನುವ ಅಫಿಡವಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಅಡಕೆ ಬೆಳೆಗಾರರನ್ನು ಸಂಘಟಿಸಿ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸಲಾಗುತ್ತದೆ. ಕೆಲವು ಸಂಘಟನೆಗಳು ಅಡಕೆ ಸಂಕಷ್ಟ ಕುರಿತಂತೆ ನ.17ರಂದು ಆವಿನಳ್ಳಿಯಿಂದ ಸಾಗರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಮ್ಮ ಸಂಘಟನೆ ಬೆಂಬಲಿಸುತ್ತಿದೆ ಹಾಗೂ ನಾವೂ ಆ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಹೇಳಿದರು.
    ಅಡಕೆ ಸೇವನೆ ಕ್ಯಾನ್ಸರ್‌ಕಾರಕ ಎಂಬ ವಿಷಯವಾಗಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಕೇಂದ್ರ ಸರ್ಕಾರ ಅದಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸಿಲ್ಲ. 2021ರಲ್ಲಿ ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ ಪ್ರಧಾನಿ ನರೇಂದ್ರ ಮೋದಿಗೆ ಅಡಕೆ ಹಾನಿಕಾರಕ ಎಂದು ಪತ್ರ ಬರೆದಿದ್ದರು. ಕೇಂದ್ರ ಸಚಿವ ಮನ್ಸೂಖ್ ಮಾಂಡವಿಯಾ ತನಿಖೆಗೆ ಆದೇಶ ಮಾಡಿದ್ದಾರೆ. ಈ ಬಗ್ಗೆ ಕ್ಯಾಂಪ್ಕೋ ಸೇರಿದಂತೆ ಅನೇಕ ಅಡಕೆ ಸಹಕಾರ ಸಂಘಗಳು ಇದರ ವಿರುದ್ಧ ಧ್ವನಿ ಎತ್ತಿವೆ. ಆದರೆ ಅಡಕೆ ಟಾಸ್ಕ್‌ಫೋರ್ಸ್ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಎಲೆಚುಕ್ಕೆ ರೋಗದಿಂದ ತೋಟಗಳೇ ನಾಶವಾಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts