More

    ಎಲೆಚುಕ್ಕೆ ರೋಗ; ಅಡಕೆ ತೋಟಗಳಿಗೆ ಮುಖ್ಯಮಂತ್ರಿಗಳ ಕರೆತಂದು ವಸ್ತುಸ್ಥಿತಿ ವಿವರಿಸಲು ಪ್ರಯತ್ನ: ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ

    ತೀರ್ಥಹಳ್ಳಿ: ಖಾಸಗಿ ಔಷಧ ಮಾರಾಟಗಾರರು ರೈತರಿಂದ ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ವಿಷಯ ತಿಳಿದು ಬಂದಿದ್ದು, ತೋಟಗಾರಿಕೆ ಇಲಾಖೆಯಿಂದಲೇ ಅಡಕೆ ಎಲೆಚುಕ್ಕೆ ರೋಗಕ್ಕೆ ಔಷಧ ವಿತರಿಸುವಂತೆ ಸೂಚಿಸಲಾಗಿದೆ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಅಡಕೆ ಮರಗಳಿಗೆ ತಗುಲಿರುವ ಎಲೆಚುಕ್ಕೆ ರೋಗದ ಕುರಿತಂತೆ ಶನಿವಾರ ಆಗುಂಬೆ ಸಮಿಪದ ಗಿಳಿಗಿನಮನೆ ಮಂಜುನಾಥ್ ಅವರ ಅಡಕೆ ತೋಟದಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮೊದಲ ಸ್ಪ್ರೇಗೆ ಅಗತ್ಯವಿರುವ 4 ಸಾವಿರ ರೂ. ಮೌಲ್ಯದ ಔಷಧವನ್ನು ಕೊಡಿಸಿದ್ದೇವೆ. ಕೊನೆ ಕೊಯ್ಯುವ ದೋಟಿಗೂ ಸಬ್ಸಿಡಿ ನೀಡಲಾಗುತ್ತಿದ್ದು ಹೊರದೇಶದಿಂದ ಬರುವ ಕಚ್ಛಾವಸ್ತುವಿನ ಸುಂಕ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
    ಈ ಭಾಗದಲ್ಲಿ ಉಧ್ಭವವಾಗಿರುವ ದಾರುಣ ಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ. ಸಾಧ್ಯವಾದರೆ ಅವರನ್ನು ಇಲ್ಲಿಗೆ ಕರೆ ತರುವ ಪ್ರಯತ್ನ ಮಾಡಲಾಗುವುದು. ಗಂಭೀರ ಹಾನಿಗೆ ಒಳಗಾಗುವ ತೋಟಗಳಿಗೆ ವಿಶೇಷ ಪರಿಹಾರ ದೊರಕಿಸುವ ಬಗ್ಗೆಯೂ ಯತ್ನಿಸಲಾಗುವುದು. ಅಡಕೆಗೆ ಎದುರಾಗಿರುವ ಈ ದುಸ್ಥಿತಿಯನ್ನು ನಿಯಂತ್ರಿಸಲು ಆಂದೋಲನದ ರೂಪದಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
    ಪ್ರಕೃತಿ ಮುನಿಸಿನಿಂದ ಅಡಕೆ ಬೆಳೆಗಾರರಿಗೆ ಎದುರಾಗಿರುವ ಎಲೆಚುಕ್ಕೆ ರೋಗ ನಿಯಂತ್ರಣದ ಬಗ್ಗೆ ಶೀಘ್ರ ಪರಿಹಾರ ದೊರಕಿಸುವಲ್ಲಿ ಕೃಷಿ ವಿಜ್ಞಾನಿಗಳು ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ರೈತರ ನೆರವಿಗೆ ಮುಂದಾಗಬೇಕು. ಸಾಂಪ್ರದಾಯಿಕವಾಗಿ ಅಡಕೆಯನ್ನು ಬೆಳೆಯುತ್ತಿದ್ದ ಬೆಳೆಗಾರರಿಗೆ ಒಮ್ಮೆಲೇ ಎದುರಾಗಿರುವ ಈ ಕಠಿಣ ಸವಾಲನ್ನು ಎದುರಿಸುವಲ್ಲಿ ಬೆಳೆಗಾರರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ನಿಮ್ಮ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸದಾ ಸಿದ್ದವಿದೆ ಎಂದು ಹೇಳಿದರು.
    ಅಡಕೆ ಬೆಳೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಈ ಭಾಗದ ರೈತರ ಬದುಕಿನ ಭಾಗವಾಗಿರುವ ಅಡಕೆ ಗಿಡಗಳು ಒಣಗುತ್ತಿದ್ದು ಬೆಳೆಗಾರರಲ್ಲಿ ಒಂದು ರೀತಿಯ ಸೂತಕದ ಛಾಯೆ ವ್ಯಕ್ತವಾಗುತ್ತಿದೆ. ಕೃಷಿ ವಿಜ್ಞಾನಿಗಳು ಇಂತಹ ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ಮುಂಚಿತವಾಗಿಯೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯುವುದಾಗಿ ತಿಳಿಸಿದರು.
    ವಿದೇಶಿ ತಜ್ಞರ ನೆರವು: ಎಲೆಚುಕ್ಕೆ ರೋಗ ನಿಯಂತ್ರಿಸಲು ಎಲ್ಲ್ಲ ರೀತಿಯ ವೈಜ್ಞಾನಿಕ ಪ್ರಯೋಗಗಳ ಮೂಲಕ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ತೀರ್ಥಹಳ್ಳಿ ತಾಲೂಕಿನ 5 ಕಡೆಗಳಲ್ಲಿ ಬೆಳೆಗಾರರಿಗೆ ವಿಶೇಷ ಮಾಹಿತಿ ಶಿಬಿರ ನಡೆಸಲಾಗಿದೆ. ವಿದೇಶಿ ತಜ್ಞರ ಮಾಹಿತಿಯ ನೆರವನ್ನೂ ಪಡೆಯಲಾಗುತ್ತಿದೆ ಎಂದು ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು. ಮಣ್ಣು ಪರೀಕ್ಷೆ ಮಾಡಿಸುವುದು ಅಗತ್ಯ ಮತ್ತು ಮರಗಳಿಗೆ ರೋಗನಿಯಂತ್ರಣ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಯೂಟ್ಯೂಬ್ ಮೂಲಕ ಮಾಹಿತಿ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts