More

    ಎರಡು ಮನೆಗಳಿಗೆ ಸಂಪೂರ್ಣ ಹಾನಿ

    ಹುಣಸೂರು: ಭಾನುವಾರ ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಸಮೇತ ಮಳೆಗೆ ಎರಡು ಮನೆಗಳು ನೆಲಕ್ಕಚ್ಚಿದ್ದು, 15ಕ್ಕೂ ಹೆಚ್ಚು ಮನೆಗಳು ಶೇ.15ರಷ್ಟು ಹಾನಿಗೊಳಗಾಗಿವೆ ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ತಿಳಿಸಿದರು.


    ತಾಲೂಕಿನ ಧರ್ಮಾಪುರ ಜಿ.ಪಂ. ವ್ಯಾಪ್ತಿ ಹಾಗೂ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಅನಾಹುತ ಹೆಚ್ಚಾಗಿದೆ. ಒಬ್ಬ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಕಸಬಾ ಹೋಬಳಿ ಹೊನ್ನಿಕುಪ್ಪೆ ಗ್ರಾಮದಲ್ಲಿ ರೇವಣ್ಣ ಮತ್ತು ಕೃಷ್ಣಯ್ಯ ಅವರ ಮನೆ ಭಾಗಶಃ ಹಾನಿಯಾಗಿದೆ. ಮಾದೇವಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಜಯಮ್ಮ ಹಾಗೂ ಶಿವ ಎನ್ನುವವರ ಮನೆ ಪೂರ್ಣ ಹಾನಿಯಾಗಿದೆ.


    ಭಾನುವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟ ಮಂಟಿಕೊಪ್ಪಲು ಗ್ರಾಮದ ನಿವಾಸಿ ಹರೀಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಎರಡು ದಿನಗಳಲ್ಲಿ ರಾಷ್ಟ್ರೀಯ ಆಪತ್ತು ನಿರ್ವಹಣಾ ನಿಧಿಯಡಿ ಕೇಂದ್ರ ಸರ್ಕಾರದಿಂದ 4 ಲಕ್ಷ ರೂ. ಮತ್ತು ರಾಜ್ಯ ಸರ್ಕಾರದ ಆಪತ್ತು ನಿರ್ವಹಣಾ ನಿಧಿಯಡಿ 1 ಲಕ್ಷ ರೂ. ಒಟ್ಟು 5 ಲಕ್ಷ ರೂ.ಗಳನ್ನು ಅವರ ಕುಟುಂಬಕ್ಕೆ ವಿತರಿಸಲಾಗುವುದು ಎಂದರು.


    ಹೊನ್ನಿಕುಪ್ಪೆ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಜಿ.ಪಂ. ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ಶಾಸಕ ಜಿ.ಡಿ.ಹರೀಶ್‌ಗೌಡರ ನಿರ್ದೇಶನದಂತೆ ತಾಲೂಕು ಆಡಳಿತ, ಮಳೆಯಿಂದಾಗಿ ಸಂತ್ರಸ್ತಗೊಂಡಿರುವ ಕುಟುಂಬಗಳ ಬಳಿ ತೆರಳಿ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯ ನಡೆಸಿದೆ. ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದು, ಇನ್ನೆರಡು ದಿನಗಳಲ್ಲಿ ತಾಲೂಕಿಗೆ ಆಗಮಿಸಿ ಸಂತ್ರಸ್ತರನ್ನು ಕಂಡು ಸಾಂತ್ವನ ತಿಳಿಸಲಿದ್ದಾರೆ ಎಂದು ತಿಳಿಸಿದರು.


    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ್, ರಾಜಸ್ವ ನಿರೀಕ್ಷಕ ನಂದೀಶ್, ಪಿಡಿಒ ಇನ್ನಿತರ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts