More

    ಎಪಿಎಂಸಿಯಲ್ಲಿ ಮಾರಾಟವಾಗದ ತರಕಾರಿ

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ಸಗಟು ತರಕಾರಿ ಮಾರುಕಟ್ಟೆ ಶುಕ್ರವಾರ ಆರಂಭವಾಗಿತ್ತಾದರೂ ಹೆಚ್ಚಿನ ವಹಿವಾಟು ನಡೆಯಲಿಲ್ಲ. ಕರೊನಾ ಭೀತಿ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆ ಮೂರು ದಿನ ಬಂದ್ ಇಡಲು ಈ ಮೊದಲು ಎಪಿಎಂಸಿ ಆಡಳಿತ ಮಂಡಳಿ ತೀರ್ವನಿಸಿತ್ತು. ಆದರೆ, ಅಗತ್ಯ ವಸ್ತುಗಳ ಮಾರಾಟಕ್ಕೆ ಜಿಲ್ಲಾಧಿಕಾರಿ ನಿಷೇಧ ತೆರವುಗೊಳಿಸಿದ ನಂತರ ಮತ್ತೆ ಯಥಾ ಪ್ರಕಾರ ಶುಕ್ರವಾರ ಮಾರುಕಟ್ಟೆ ಪುನಾರಂಭವಾಗಿತ್ತು.

    ಆದರೆ, ಹುಬ್ಬಳ್ಳಿ ಎಪಿಎಂಸಿಯಿಂದ ಖರೀದಿ ಮಾಡಿದ ತರಕಾರಿಯನ್ನು ನಗರ ಪ್ರದೇಶದ ಸಂತೆಗಳಲ್ಲಿ ಮಾರಾಟ ಮಾಡಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಬಹಳಷ್ಟು ಖರೀದಿದಾರರು ತರಕಾರಿ ಕೊಳ್ಳಲು ಬಂದಿಲ್ಲ. ಹಾಗಾಗಿ ಎಪಿಎಂಸಿಗೆ ಬಂದಿದ್ದ ತರಕಾರಿ ಪೈಕಿ ಅರ್ಧದಷ್ಟು ಮಾರಾಟವಾಗದೇ ಹಾಗೇ ಉಳಿದಿತ್ತು. ಇದರಿಂದ ರೈತರು ನಷ್ಟ ಅನುಭವಿಸುವಂತಾಯಿತು. ಅಲ್ಲದೇ ರೈತರಿಂದ ಖರೀದಿಸಿಟ್ಟುಕೊಂಡಿರುವ ಸಗಟು ವ್ಯಾಪಾರಸ್ಥರು ಸಹ ಸಮಸ್ಯೆ ಎದುರಿಸುವಂತಾಯಿತು.

    ಟೊಮೆಟೊ, ಬದನೆಕಾಯಿ, ಸೌತೆಕಾಯಿ, ಕ್ಯಾಬಿಜ್, ಗಜ್ಜರಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಮೆಂತೆ, ಕೋತಂಬ್ರಿ ಬಹುತೇಕ ತರಕಾರಿ ಕೇಳುವವರೇ ಇರಲಿಲ್ಲ. ಕೆಲವೇ ಜನ ಖರೀದಿದಾರರು ತರಕಾರಿ ಕೊಂಡೊಯ್ದರು. ಬಡಾವಣೆ ಪ್ರದೇಶದಲ್ಲಿ ಮಾರಾಟ ಮಾಡಲು ಮುಂದಾದರು.

    ಟೊಮೆಟೊ, ಬದನೆಕಾಯಿ, ಸೌತೆಕಾಯಿಗಳ 5- 10 ಕೆಜಿ ಬುಟ್ಟಿ, ಬಾಕ್ಸ್​ಗಳಿಗೆ ಕೇವಲ 30- 40 ರೂ. ದರ ಇತ್ತು.

    ಹುಬ್ಬಳ್ಳಿಗೆ ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಕೊಪ್ಪಳ, ಗದಗ, ಹಾವೇರಿ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಿಂದ ತರಕಾರಿ ಬರುತ್ತದೆ. ಶುಕ್ರವಾರ ಸುಮಾರು 80 ಲೋಡ್ (ವಾಹನ) ತರಕಾರಿ ಬಂದಿತ್ತು. ಸಾಮಾನ್ಯ ದಿನಗಳಲ್ಲಿ ಸುಮಾರು 150ರಿಂದ 200 ಲೋಡ್ ಬರುತ್ತದೆ. ಆದರೆ, ಶುಕ್ರವಾರ ಬಂದಿದ್ದ ಕಡಿಮೆ ತರಕಾರಿಯಲ್ಲೇ ಅರ್ಧದಷ್ಟು ಮಾರಾಟವಾಗದೆ ಉಳಿದುಕೊಂಡಿದೆ ಎಂದು ವರ್ತಕರು ಅಲವತ್ತುಕೊಂಡರು.

    70- 80 ಚೀಲ ಹಸಿ ಮೆಣಸಿನಕಾಯಿ ಶುಕ್ರವಾರ ನಮ್ಮ ಅಂಗಡಿಗೆ ಬಂದಿತ್ತು. ಅದರಲ್ಲಿ 35 ಚೀಲ ಮಾರಾಟವಾಗದೇ ಉಳಿದಿದೆ. ಮೊದಲೇ ತರಕಾರಿ ಬೆಲೆ ಇಳಿಮುಖವಾಗಿದೆ. ಕರೊನಾ ಭೀತಿಗೆ ಈಗ ಮತ್ತಷ್ಟು ಕಡಿಮೆಯಾಗುತ್ತಿದೆ.
    | ಎಚ್. ರಸೂಲ್​ಸಾಬ್, ಹಸಿಮೆಣಸಿನಕಾಯಿ ವ್ಯಾಪಾರಸ್ಥರು, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts