More

    ಎನ್‌ಇಪಿ ಪರಿಷ್ಕರಣೆ ಗೊಂದಲ ತರದಿರಲಿ-ಡಾ.ಅಥಣಿ ವೀರಣ್ಣ

    ದಾವಣಗೆರೆ: ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ರಾಜ್ಯ ಸರ್ಕಾರ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಮೂಡಿಸಬಾರದು ಎಂದು ಕೈಗಾರಿಕೋದ್ಯಮಿ ಡಾ.ಅಥಣಿ ವೀರಣ್ಣ ಹೇಳಿದರು.
    ನಗರದ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಅಕ್ಕಮಹಾದೇವಿ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಅಕ್ಕಮಹಾದೇವಿ ಸಹಾಯನಿಧಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ಪರಿಷ್ಕರಣೆ ಮಾಡುವುದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿದೆ. ನೀತಿ ಬದಲಾವಣೆ ಮಾಡುವುದಾದರೆ ಮಾಡಲಿ, ಆದರೆ ಇದು ಮಕ್ಕಳಲ್ಲಿ ಗೊಂದಲ, ಆತಂಕ ಸೃಷ್ಟಿಸುವ ವಾತಾವರಣ ನಿರ್ಮಾಣ ಆಗಬಾರದು ಎಂದರು.
    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲ ಸಾಕಷ್ಟು ಬದಲಾಗಿದ್ದು, ತಾಂತ್ರಿಕತೆ ಬಹಳಷ್ಟು ಮುಂದುವರೆದಿದೆ. ನಿನ್ನೆಯ ತಾಂತ್ರಿಕತೆ ನಾಳೆಗೆ ಅಪ್‌ಡೇಟ್ ಆಗಿರುತ್ತದೆ. ಅದರಂತೆ ವಿದ್ಯಾರ್ಥಿಗಳು ಕೂಡ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಅಧ್ಯಯನ ಮಾಡಬೇಕು ಹಾಗೂ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಬೇಕು ಎಂದುತಿಳಿಸಿದರು.
    ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಹುಮ್ಮಸ್ಸು ಹಾಗೂ ಉತ್ತೇಜನ ನೀಡುವ ಕಾರ್ಯವಾಗಿದೆ. ಇದರಿಂದ ಹೆಚ್ಚಿನ ಪರಿಶ್ರಮದಿಂದ ಅಧ್ಯಯನ ಮಾಡಬೇಕೆಂಬ ಮನೋಭಾವ ಬರಲಿದೆ ಎಂದರು.
    ಅಕ್ಕಮಹಾದೇವಿ ಸಮಾಜದ ತಾಯಂದಿರು ದಿಟ್ಟ ಹೋರಾಟದಿಂದ ಯಾವ ಪುರುಷರೂ ಮಾಡದಂತಹ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ.ಮಹಿಳಾ ಸೇವಾ ಸಮಾಜ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಅತ್ಯುತ್ತಮ ಕಾರ್ಯಗಳಾಗಿವೆ. ಸಮಾಜವು ಸೇವಾಕಾರ್ಯಗಳ ಮೂಲಕ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
    ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕೆ.ಸಿ.ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್, ಜಯಮ್ಮ ನೀಲಗುಂದ, ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್ .ಬಿ.ವಸಂತಕುಮಾರಿ, ಉಪ ಸಮಿತಿ ಅಧ್ಯಕ್ಷೆ ಶಾಂತಾ ಯಾವಗಲ್ ಇದ್ದರು.
    ಎಸ್ಸೆಸ್ಸೆಲ್ಸಿ- ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಅಥಣಿ ವೀರಣ್ಣ ಅವರನ್ನು ಸನ್ಮಾನಿಸಲಾಯಿತು.
    ಅಕ್ಕಮಹಾದೇವಿ ಸಮಾಜದ ಕಾರ್ಯದರ್ಶಿ ದೊಗ್ಗಳ್ಳಿ ಸುವರ್ಣ ಸ್ವಾಗತಿಸಿದರು. ಉಪಸಮಿತಿ ಕಾರ್ಯದರ್ಶಿ ಸುಮಾ ಪ್ರಾಸ್ತಾವಿಕ ಮಾತನಾಡಿದರು, ಸುನಿತಾ ಇಂದೂಧರ್ ಕಾರ್ಯಕ್ರಮ ನಿರೂಪಿಸಿದರು.
    ——-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts