More

    ಎಂಬಿಬಿಎಸ್ ವಿದ್ಯಾರ್ಥಿಗಳ ಬಳಕೆ – ಡಿಸಿಎಂ ಲಕ್ಷ್ಮಣ ಸವದಿ

    ನಿಪ್ಪಾಣಿ: ಈ ಬಾರಿ ಎಂಬಿಬಿಎಸ್ ವ್ಯಾಸಂಗ ಪೂರೈಸಿದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ, ಅವರನ್ನೂ ಕೋವಿಡ್ ಸೋಂಕಿತರ ಸೇವೆಗೆ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ನಿಪ್ಪಾಣಿ ನಗರದ ಜೊಲ್ಲೆ ಉದ್ಯೋಗ ಸಮೂಹದ ಶಿಕ್ಷಣ ಸಂಸ್ಥೆಯಲ್ಲಿ ನಿಪ್ಪಾಣಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆಯ ಆಯುಷ್ ವಿಭಾಗದ ಸಹಯೋಗದಲ್ಲಿ 40 ಹಾಸಿಗೆ ಸಾಮರ್ಥ್ಯದ ಕೋವಿಡ್ ಉಪಚಾರ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಕರೊನಾ ತೀವ್ರತೆ ಹೆಚ್ಚಿದೆ. ಜನರು ಎಚ್ಚರ ವಹಿಸಬೇಕಿದೆ. ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸಬೇಕಿದೆ. ರಾಜ್ಯಕ್ಕೆ ಹೆಚ್ಚಿನ ಔಷಧ, ಆಕ್ಸಿಜನ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದರು.

    ನಿಪ್ಪಾಣಿಯಲ್ಲಿ ತಮ್ಮ ಕ್ಷೇತ್ರದ ಜನರು ಆರೋಗ್ಯದಿಂದ ಇರಬೇಕು ಎಂಬ ಉದ್ದೇಶದಿಂದ ಜೊಲ್ಲೆ ದಂಪತಿ ಕೋವಿಡ್ ಉಪಚಾರ ಕೇಂದ್ರ ಆರಂಭಿಸಿದ್ದಾರೆ. ಇದು ಅವರ ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತದೆ. ನೆರೆಯ ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ ಹೆಚ್ಚಿದ್ದರಿಂದ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕರೊನಾ ಹರಡುವಿಕೆ ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಸರ್ಕಾರದ ಜತೆ ಕೈಜೋಡಿಸಬೇಕು. ಕಳೆದ ವರ್ಷ ಆಕ್ಸಿಜನ್, ಬೆಡ್ ಅವಶ್ಯಕತೆ ಇರಲಿಲ್ಲ. ಈ ವರ್ಷ ಅವೆರಡಕ್ಕೂ ಬೇಡಿಕೆ ಹೆಚ್ಚಿದೆ. ನಿಪ್ಪಾಣಿ ಭಾಗದಲ್ಲಿ ಸೋಂಕಿತರಿಗೆ ಅನುಕೂಲವಾಗಬೇಕೆನ್ನುವ ಉದ್ದೇಶದಿಂದ ಉಚಿತವಾಗಿ ಕೋವಿಡ್ ಉಪಚಾರ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ, ಚಂದ್ರಕಾಂತ ಕೋಠಿವಾಲೆ, ಎಂ.ಪಿ. ಪಾಟೀಲ, ಜ್ಯೋತಿ ಪ್ರಸಾದ ಜೊಲ್ಲೆ, ಡಿಎಚ್‌ಒ ಡಾ. ಎಸ್.ವಿ. ಮುನ್ಯಾಳ, ಎಡಿಎಚ್‌ಒ ಡಾ. ಎಸ್.ಎಸ್. ಗಡೇದ, ನೀತಾ ಬಗಡೆ, ಡಿವೈಎಸ್ಪಿ ಮನೋಜ ಪಾಟೀಲ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಸಂಗೀತಾ ದೇಶಪಾಂಡೆ, ಡಾ.ಗೌರವ ಬಾಬರ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ ಇದ್ದರು.

    ರಾಜ್ಯದಲ್ಲಿ 1300 ಕಿ.ಲೀ. ಆಕ್ಸಿಜನ್ ಅಗತ್ಯವಿದ್ದು, ಸದ್ಯ 900 ಕಿ.ಲೀ ಅಕ್ಸಿಜನ್ ಮಾತ್ರ ಲಭ್ಯವಿದೆ. ಅಗತ್ಯ ಆಕ್ಸಿಜನ್ ಪೂರೈಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ.
    | ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts