More

    ಊರಿಗೆ ಮರಳಿದ ಹಳ್ಳಿಗರು, ಕೃಷಿ ಚಟುವಟಿಕೆ, ಕ್ರೀಡೆಗಳಲ್ಲಿ ತಲ್ಲೀನ, ಕೂಡು ಕುಟುಂಬದ ಕಲರವ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಎರಡನೇ ಬಾರಿಯ ಕರೊನಾ ಕರ್ಯ್ೂ ಹಳ್ಳಿಗರನ್ನು ಮರಳಿ ಊರಿಗೆ ಕರೆಸಿದೆ. 14 ದಿನದ ಸುದೀರ್ಘ ರಜೆ ಮತ್ತೊಮ್ಮೆ ಹಳ್ಳಿಗಳಲ್ಲಿ ಕೂಡುಕುಟುಂಬದ ವಾತಾವರಣಕ್ಕೆ ಕಾರಣವಾಗಿದೆ. ಉದ್ಯೋಗ ಅರಸಿ ಬೆಂಗಳೂರು ಸೇರಿ ವಿವಿಧ ಮಹಾನಗರಿಗಳಲ್ಲಿ ವಾಸ್ತವ್ಯ ಹೂಡಿದ್ದವರು ಮತ್ತೆ ಸ್ವಗ್ರಾಮಗಳಲ್ಲಿ ಕಾಣ ಸಿಗುತ್ತಿದ್ದಾರೆ. ಕಳೆದ ವರ್ಷ ಕೃಷಿ ಚಟುವಟಿಕೆ ಮೂಲಕ ಸುದೀರ್ಘ ಲಾಕ್‌ಡೌನ್ ಪೂರೈಸಿದ್ದ ಹಳ್ಳಿಗರು ಮತ್ತೊಮ್ಮೆ ನೇಗಿಲು ಹಿಡಿಯುತ್ತಿದ್ದಾರೆ. ಮಳೆಗಾಲಕ್ಕೆ ಭೂಮಿ ಹದ ಮಾಡುವುದು, ಜಮೀನುಗಳಲ್ಲಿ ಕಳೆ ಕಿತ್ತು ಒಪ್ಪ ಮಾಡುವುದು, ಕೆಟ್ಟ ಬೋರ್‌ವೆಲ್ಗಳ ದುರಸ್ತಿ, ತೆಂಗು ಬೆಳೆಸುವತ್ತ ಚಿತ್ತ ಹರಿಸುತ್ತಿರುವುದು ಕಂಡುಬರುತ್ತಿದೆ.

    ಯುವಪಡೆಯ ಶ್ರಮದಾನ: ಕಳೆದ ಬಾರಿ ಅನೇಕ ಗ್ರಾಮಗಳಲ್ಲಿ ಯುವಕರೆಲ್ಲ ಸೇರಿ ಗ್ರಾಮದ ಸ್ವಚ್ಛತೆಗೆ ಕೈಜೋಡಿಸಿದ್ದರು. ಚರಂಡಿ ಸ್ವಚ್ಛತಾ ಕಾರ್ಯ, ರಸ್ತೆ ದುರಸ್ತಿ, ದೇಗುಲಗಳ ಜೀರ್ಣೋದ್ಧಾರ ಸೇರಿ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಊರ ಹಿರಿಯರ ಗಮನ ಸೆಳೆದಿದ್ದರು. ಈ ಬಾರಿಯೂ ಅನೇಕ ಗ್ರಾಮಗಳಲ್ಲಿ ಇಂಥ ಸಮಾಜಮುಖಿ ಕಾರ್ಯಗಳಿಗೆ ಯುವಕರು ಮುಂದಾಗುತ್ತಿದ್ದಾರೆ.

    ಕ್ರೀಡೆಗಳತ್ತ ಒಲವು: ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದ ಯುವಕರು ಈಗ ಊರತುಂಬೆಲ್ಲಾ ಕಾಣಸಿಗುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಬ್ಯಾಟ- ವಿಕೇಟು ಹಿಡಿದು ಕ್ರಿಕೆಟ್ ಆಟದಲ್ಲಿ ತೊಡಗುತ್ತಿದ್ದಾರೆ. ಯುವಕರಿಲ್ಲದೆ ಭಣಗುಡುತ್ತಿದ್ದ ಹಳ್ಳಿಗಳಲ್ಲಿ ಈಗ ಹುಡುಗರದ್ದೇ ಸದ್ದುಗದ್ದಲ. ಬೆಳಗ್ಗೆ ಹಾಗೂ ಇಳಿಸಂಜೆ ವೇಳೆ ಯುವಕರ ದಂಡೇ ಕ್ರಿಕೆಟ್ ಆಟದಲ್ಲಿ ತಲ್ಲೀನರಾಗುತ್ತಿರುವ ದೃಶ್ಯ ಕಂಡುಬರುತ್ತಿದೆ.

    ಗ್ರಾಮೀಣ ಕ್ರೀಡೆಗಳಿಗೆ ಮರುಜೀವ: ಈಗೆಲ್ಲ ಮೊಬೈಲ್ ಗೇಮ್ಗಳಲ್ಲೆ ಕಾಲಹರಣ ಮಾಡುವುದು ಸಾಮಾನ್ಯ. ಮೊಬೈಲ್ ಮಾಯೆಯಲ್ಲಿ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇಂಥ ಕಾಲಘಟ್ಟದಲ್ಲಿ ಕರೊನಾ ಲಾಕ್‌ಡೌನ್ ಮತ್ತೊಮ್ಮೆ ಗ್ರಾಮೀಣ ಕ್ರೀಡೆಗಳಿಗೆ ಮರುಹುಟ್ಟು ನೀಡುತ್ತಿದೆ. ಬುಗುರಿ ಆಟ, ಚಿಣ್ಣಿದಾಂಡು,ಲಗೋರಿ, ಚೌಕಾಬಾರ, ಅಳುಗುಣಿಮಣೆ, ಕಬಡ್ಡಿ ಮತ್ತಿತರ ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು ತೊಡಗುತ್ತಿರುವ ದೃಶ್ಯ ಕಂಡುಬರುತ್ತಿದೆ.

    ನಗರದ ಯಾಂತ್ರಿಕ ಜೀವನದಲ್ಲಿ ಕಳೆದು ಹೋಗಿರುವ ಜನತೆ ವರ್ಷಕ್ಕೆ ಒಮ್ಮೆಯಾದರೂ ಊರ ಕಡೆ ಮುಖ ಮಾಡದ ನಿದರ್ಶನಗಳಿವೆ. ಹಬ್ಬ, ಜಾತ್ರೆಯಂಥ ವಿಶೇಷ ಕಾರ್ಯಕ್ರಮಗಳಲ್ಲಿ ಮುಖ ತೋರಿಸಿ ಮರೆಯಾಗುತ್ತಿದ್ದ ಅದೆಷ್ಟೋ ಮಂದಿಗೆ ನೆಂಟರಿಷ್ಟರೊಂದಿಗೆ ಒಂದೆರಡು ಮಾತನಾಡಲು ಸಮಯಾವಕಾಶ ಸಿಗುತ್ತಿರಲಿಲ್ಲ. ಕರೊನಾ ಲಾಕ್‌ಡೌನ್ ಮತ್ತೊಮ್ಮೆ ಇವೆಲ್ಲ ಸನ್ನಿವೇಶಗಳಿಗೆ ಮರುಜೀವ ನೀಡಿದೆ.

    ಮನೆಗೆ ಮರಳಿ: ನಗರಗಲ್ಲಿ ಕರೊನಾ ಪ್ರಕರಣಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಗ್ರಾಮಗಳಿಗೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ. ಲಾಕ್‌ಡೌನ್ ತೆರವು ಬಳಿಕ ಕರೊನಾ ಸೋಂಕು ಹತೋಟಿಗೆ ಬರುವವರೆಗೆ ಊರಿನಲ್ಲೆ ಇರಿ ಪಟ್ಟಣ ಪ್ರದೇಶಗಳತ್ತ ಹೋಗುವುದೇ ಬೇಡ ಎಂದು ಪಟ್ಟು ಹಿಡಿಯುತ್ತಿದ್ದು, ಪಾಲಕರ ಒತ್ತಾಯಕ್ಕೆ ಮಣಿದು ಅನೇಕರು ಹಳ್ಳಿ ದಾರಿ ಹಿಡಿಯುತ್ತಿರುವುದು ಕಂಡುಬರುತ್ತಿದೆ.

    ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕರೊನಾದಿಂದ ಮುಕ್ತಿ ಯಾವಾಗ ಎಂಬುದನ್ನು ಎದುರು ನೋಡುತ್ತಿದ್ದೇವೆ. ಪಟ್ಟಣ ಪ್ರದೇಶಗಳಲ್ಲಿ ಈಗಷ್ಟೆ ಬದುಕು ಕಟ್ಟಿಕೊಳ್ಳುತ್ತಿದ್ದ ಹಳ್ಳಿ ಮಕ್ಕಳು ಇಂಥ ಪರಿಸ್ಥಿತಿಯಲ್ಲಿ ಜೀವನದ ಬಂಡಿ ಎಳೆಯುವುದು ಕಷ್ಟ ಸಾಧ್ಯ. ಈ ವೇಳೆ ಹಳ್ಳಿಗಳೇ ಅವರಿಗೆಲ್ಲ ಆಸರೆ.
    ಪುಟ್ಟಸ್ವಾಮಿ, ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts