More

    ಉಸ್ತುವಾರಿ ಏಕೆ ನೀಡಿದ್ದಾರೆ ಎಂಬುದೇ ತಿಳಿದಿಲ್ಲ, ಸಚಿವ ಎಂಟಿಬಿ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಲೇವಡಿ

    ಸೂಲಿಬೆಲೆ: ಜಿಲ್ಲೆಯ ಉಸ್ತುವಾರಿ, ಶಿಷ್ಟಾಚಾರ ಎಂಬ ಭ್ರಮೆಯಲ್ಲಿರುವ ಹಿಂಬಾಗಿಲಿನ ರಾಜಕಾರಣಿಗೆ ಯಾವ ಜಿಲ್ಲೆಯ ಉಸ್ತುವಾರಿ ಯಾವ ಕಾರಣಕ್ಕಾಗಿ ನೀಡಲಾಗಿದೆ ಎಂಬ ಜ್ಞಾನವೇ ಇಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅವರು ಸಚಿವ ಎಂಟಿಬಿ ನಾಗರಾಜ್ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

    ನಗರೇನಹಳ್ಳಿಯಲ್ಲಿ ಶಾಸಕರ ಅನುದಾನದ 10 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ 2 ಲಕ್ಷ ರೂ. ವೆಚ್ಚದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಅ.12ರಂದು 7 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರಿ ವರ್ಗ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ, ಕಾರ್ಯಕ್ರಮಕ್ಕೆ ಗೈರಾಗಿ, 2 ಡಿಎಆರ್ ಪೊಲೀಸ್ ವಾಹನ ಹಾಗೂ ಪೊಲೀಸ್ ಅಧಿಕಾರಿಗಳ ದಂಡಿನೊಂದಿಗೆ ಬಂದು ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿ ಅಧಿಕಾರ ದರ್ಪ ತೋರುವ ಅಗತ್ಯ ಏನಿತ್ತು ಎಂದು ಕಿಡಿಕಾರಿದರು.

    ರಾಜ್ಯದ ಮಂತ್ರಿಯಾಗಿ, ಇಲಾಖೆಯ ಕಾರ್ಯಕ್ರಮ ನಿಭಾಯಿಸುವುದನ್ನು ಬಿಟ್ಟು, ಕೇವಲ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ 4 ತಾಲೂಕುಗಳಿವೆ ಎಂಬುದೇ ಅವರಿಗೆ ಮರೆತು ಹೋದಂತೆ ಕಾಣಿಸುತ್ತಿದೆ. ಸಚಿವರು ಹೊಸಕೋಟೆ ತಾಲೂಕಿಗೆ ಸೀಮಿತರಾಗಿದ್ದಾರೆ ಎಂದರು.

    ಕೋವಿಡ್ ಸಚಿವ: ಕರೊನಾ ಸಂದರ್ಭದಲ್ಲಿ ಮಾತ್ರ ಎಂಟಿಬಿ ನಾಗರಾಜ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಅರಿವಿಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಎಂದು ಅವರು ದರ್ಬಾರು ಮಾಡುತ್ತಿದ್ದಾರೆ ಎಂದು ಶರತ್ ಬಚ್ಚೇಗೌಡ ಟೀಕಿಸಿದರು.

    ತಾಪಂ ಮಾಜಿ ಅಧ್ಯಕ್ಷ ಡಾ.ಡಿ.ಟಿ.ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷ ಮುನಿರಾಜು, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಮುನಿಯಪ್ಪ, ಕಂಬಳಿಪುರ ಗ್ರಾಪಂ ಅಧ್ಯಕ್ಷ ರಮೇಶ್, ತಾಪಂ ಮಾಜಿ ಸದಸ್ಯ ನಾಗರಾಜಪ್ಪ, ಮುಖಂಡರಾದ ಅಮ್ಜದ್ ಬೇಗ್, ಶಿವಕುಮಾರ್, ಗುತ್ತಿಗೆದಾರ ವೆಂಕಟೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts