More

    ಉಸುಕು ಸಹಿತ ಮೂರು ಟ್ರ್ಯಾಕ್ಟರ್ ವಶಕ್ಕೆ

    ಅಕ್ಕಿಆಲೂರ: ವರದಾ ನದಿಯಲ್ಲಿ ಅಕ್ರಮವಾಗಿ ಉಸುಕು ಗಣಿಗಾರಿಕೆ ಮಾಡುತ್ತಿದ್ದ ದಂಧೆಕೋರರ ಮೇಲೆ ಸೋಮವಾರ ಬೆಳಗಿನ ಜಾವ ದಾವಣಗೆರೆ ಐಜಿಪಿ ಕಚೇರಿಯ ಹಿರಿಯ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದು, ಮೂರು ಉಸುಕು ತುಂಬಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದು ಐವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಮಲ್ಲಿಕಾರ್ಜುನ ಭರಮಪ್ಪ ಉಳ್ಳಾಗಡ್ಡಿ (37), ರಾಜು ಯಂಕಪ್ಪ ಲಮಾಣಿ (26), ಸಂತೋಷ ದೇವೇಂದ್ರಪ್ಪ ಉಳ್ಳಾಗಡ್ಡಿ (27), ಫಕೀರಪ್ಪ ಬಸವೆಣ್ಣೆಪ್ಪ ಉಳ್ಳಾಗಡ್ಡಿ (74), ಯಂಕಪ್ಪ ಡಾಕಪ್ಪ ಲಮಾಣಿ (45), ದೇವೀಂದ್ರಪ್ಪ ಬಸಲಿಂಗಪ್ಪ ಉಳ್ಳಾಗಡ್ಡಿ (60) ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರವಾಹದ ನಂತರ ವರದಾನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಸುಕು ಹರಿದು ಬಂದಿತ್ತು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ದಂಧೆಕೋರರು ನಿರಂತರವಾಗಿ ಉಸುಕು ಬಗೆಯುತ್ತಿದ್ದರು. ಪ್ರಶ್ನೆ ಮಾಡಿದ ರೈತರ ಮೇಲೆಯೇ ಹಲ್ಲೆ ಮಾಡುತ್ತಿದ್ದರು. ಹಾನಗಲ್ಲ ತಾಲೂಕಿನ ಪೊಲೀಸರಿಗೆ ಇಂತಿಷ್ಟು ಹಣ ನೀಡಿದರೆ ಉಸುಕು ಹೇರುವ ಟ್ರ್ಯಾಕ್ಟರ್​ಗಳನ್ನು ಮಂತ್ಲಿ ಟ್ರ್ಯಾಕ್ಟರ್ ಎಂದು ಪರಿಗಣಿಸಿರುವ ಕುರಿತು ಆರೋಪ ಕೇಳಿ ಬಂದಿದ್ದವು. ಈ ಕುರಿತು ಏ. 12ರಂದು ‘ವಿಜಯವಾಣಿ’ಯಲ್ಲಿ ‘ವರದಾ ನದಿ ಮಡಿಲಿಗೆ ಕನ್ನ’ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಗಿನ ಜಾವ ದಾಳಿ ಮಾಡಿ ಉಸುಕು ಗಣಿಗಾರಿಕೆ ಮಾಡುತ್ತಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಾವಣಗೆರೆ ಐಜಿಪಿ ಕಚೇರಿಯ ಡಿವೈಎಸ್ಪಿ ತಿರುಮಲೇಶ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ದಾವಣಗೆರೆ ಪೊಲೀಸರಿಂದ ದಾಳಿ: ವರದಾ ನದಿಯಲ್ಲಿ ಅಕ್ರಮ ಉಸುಕು ಗಣಿಗಾರಿಕೆ ನಡೆಯುತ್ತಿದ್ದರೂ, ಹಾನಗಲ್ಲ ತಾಲೂಕಿನ ಪೊಲೀಸರ ಮೌನ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಸೋಮವಾರ ಬೆಳಗಿನ ಜಾವ ನಡೆದ ದಾಳಿಯನ್ನು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ದಾವಣಗೆರೆ ಐಜಿಪಿ ಕಚೇರಿಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts