More

    ಉಳ್ಳಾವಳ್ಳಿಯಲ್ಲಿ ಜಾನುವಾರುಗಳ ಉತ್ಸವ

    ಚನ್ನರಾಯಪಟ್ಟಣ: ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಕಾರಹಬ್ಬದ ಪ್ರಯುಕ್ತ ಕರಿಗಲ್ಲು ಪೂಜೆ(ಶ್ರೀ ಬ್ರಹ್ಮದೇವರ ಕಲ್ಲು) ಹಾಗೂ ಜಾನುವಾರುಗಳ ಉತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

    ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವ ಎತ್ತಿನಬಂಡಿ, ನೇಗಿಲು-ಮರಮುಟ್ಟುಗಳಿಗೆ ಪೂಜೆ ಸಲ್ಲಿಸುವ ಪುರಾತನ ಹಬ್ಬ ಇದಾಗಿದೆ. ಕೃಷಿಯಲ್ಲಿ ಅಭಿವೃದ್ಧಿ, ಜಾನುವಾರುಗಳಿಗೆ ಆರೋಗ್ಯ ಹಾಗೂ ಆಯಸ್ಸು ಲಭಿಸುತ್ತದೆ ಎಂಬುದು ರೈತರ ಬಲವಾದ ನಂಬಿಕೆಯಾಗಿದೆ.

    ಬೆಳಗ್ಗೆಯೇ ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಬಲೂನ್ ಮತ್ತು ಸುನ್ನಾರಿ ಸುತ್ತಲಾಯಿತು. ಕುತ್ತಿಗೆಗೆ ಗೆಜ್ಜೆಹಾರ ಹಾಗೂ ಕಾಲಿಗೆ ಕರಿದಾರ ಕಟ್ಟಿ ಸಿಂಗರಿಸಲಾಯಿತು. ಜಾನುವಾರುಗಳ ಮೈಮೇಲೆ ಓಂ ಅಥವಾ ಸ್ವಸ್ತಿಕ್ ಹಾಗೂ ಜಾನುವಾರುಗಳ ಬೆಲೆಯನ್ನು ಬಣ್ಣದಿಂದ ಬರೆಯುವುದು ಒಂದು ಕಲೆಯಾಗಿದೆ.

    ಜಾನುವಾರುಗಳ ಪಾದಪೂಜೆ: ಸಿಂಗಾರಗೊಂಡಿದ್ದ ಜಾನುವಾರುಗಳನ್ನು ಸಂಜೆ ಮನೆಯ ಬಾಗಿಲಲ್ಲಿ ನಿಲ್ಲಿಸಿ ಮುಖ ತೊಳೆದು ಕುಂಕುಮ ಬಳಿದು ಹೂವು ಮುಡಿಸಲಾಯಿತು. ಪೂಜೆ ಮಾಡಿದ ಮುತ್ತೈದೆಯರು ತಮ್ಮ ಮಾಂಗಲ್ಯವನ್ನು ಜಾನುವಾರುಗಳ ಪಾದಕ್ಕೆ ಸ್ಪರ್ಶಿಸಿ ಹಣೆಗೆ ಹೊತ್ತಿ ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸುವಂತೆ ಬೇಡಿಕೊಳ್ಳುವುದು ಪಾದ ಪೂಜೆಯ ವಿಶೇಷ.

    ಬಳಿಕ ರೈತರು ತಮ್ಮ ಜಾನುವಾರುಗಳೊಂದಿಗೆ ಕರಿಗಲ್ಲು ಇರುವಲ್ಲಿ ಒಟ್ಟಾಗಿ ಸೇರಿದ್ದು ಕರಿಗಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಾನುವಾರುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ದಿಡಗ ಹಳೇ ಗ್ರಾಮದ ರಾಮಚಂದ್ರಯ್ಯ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ವಾಡಿಕೆಯಂತೆ ಮೂರು ಹೋರಿಗಳನ್ನು ಓಡಿಸಿಕೊಂಡು ಯುವಕರು ಊರನ್ನು ಒಂದು ಸುತ್ತು ಬಳಸಿ ಬಂದರು. ಅವರಲ್ಲಿ ಓರಿಯೊಂದಿಗೆ ಮೊದಲು ಬಂದ ಯುವಕ ಅಭಿ ಎಂಬಾತ ಗ್ರಾಮದ ಹೆಬ್ಬಾಗಿಲಿಗೆ ಕಟ್ಟಿರುವ ದಂಡೆಯನ್ನು (ತೋರಣ) ಕೀಳುವ ಮೂಲಕ ಕಾರಹಬ್ಬಕ್ಕೆ ತೆರೆ ಬಿದ್ದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts