More

    ಉಳ್ಳಾಗಡ್ಡಿ ಬೆಳೆಗಾರರಿಗೆ ತಪ್ಪದ ಗೋಳು!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನ ಉಳ್ಳಾಗಡ್ಡಿ ಬೆಳೆಗಾರರಿಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಕಳೆದ ವರ್ಷ ಬೆಲೆ ಕುಸಿತ, ನೆರೆ ಹಾವಳಿಯಿಂದ ಕಂಗೆಟ್ಟಿದ್ದ ಬೆಳೆಗಾರರು ಈ ಬಾರಿ ಎಲೆ ಮಚ್ಚೆ ರೋಗ ಹಾಗೂ ನಿರಂತರ ಮಳೆಯಿಂದಾಗಿ ಮತ್ತೆ ಕಣ್ಣೀರು ಹಾಕುವಂತಾಗಿದೆ.

    ಪ್ರಸಕ್ತ ವರ್ಷ ಆರಂಭದಲ್ಲಿ ಅಷ್ಟೊಂದು ಮಳೆಯಾಗಿರಲಿಲ್ಲ. ಆದರೆ, ಕಳೆದ ಎರಡ್ಮೂರು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಿಗೆಯಾಗಿ ಉಳ್ಳಾಗಡ್ಡಿ ಬೆಳೆಗೆ ಎಲೆ ಮಚ್ಚೆ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಎಲೆ ಸಂಪೂರ್ಣವಾಗಿ ಗೋಧಿ ಬಣ್ಣಕ್ಕೆ ತಿರುಗುತ್ತಿದ್ದು, ಗಡ್ಡೆಗಳು ಬೆಳೆಯುವ ಮುಂಚೆಯೇ ಭೂಮಿಯಿಂದ ಮೇಲೇಳತೊಡಗಿವೆ.

    ಕೆಲ ಜಮೀನುಗಳಲ್ಲಿ ಬಿತ್ತನೆ ಮಾಡಿದ ಶೇ. 25ರಷ್ಟು ಭಾಗದಲ್ಲಿ ಉಳ್ಳಾಗಡ್ಡಿ ಬೆಳೆದೇ ಇಲ್ಲ. ಹೀಗಾಗಿ ರೈತರಿಗೆ ಬೆಳೆ ಕೈ ಸೇರುವುದೋ, ಇಲ್ಲವೋ ಎಂಬ ಚಿಂತೆ ಕಾಡತೊಡಗಿದೆ. ಮತ್ತೊಂದೆಡೆ ಬೆಳೆ ಬಂದರೂ ಇಳುವರಿ ಕುಂಠಿತವಾಗುವ ಸಾಧ್ಯತೆ ದಟ್ಟವಾಗಿದೆ.

    ತಾಲೂಕಿನ ಹಲಗೇರಿ, ಕಾಕೋಳ, ಗುಡ್ಡದ ಆನ್ವೇರಿ, ಕಜ್ಜರಿ, ಕುಪ್ಪೇಲೂರ, ಯರೇಕುಪ್ಪಿ ಸೇರಿ ವಿವಿಧ ಗ್ರಾಮಗಳ ರೈತರು ಸುಮಾರು 4014 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದಾರೆ.

    2019 ಆಗಸ್ಟ್, ಅಕ್ಟೋಬರ್​ನಲ್ಲಿ ಸುರಿದ ನಿರಂತರ ಮಳೆಯಿಂದ ಅತಿವೃಷ್ಟಿ ಉಂಟಾಗಿ ಶೇ. 50ರಷ್ಟು ಬೆಳೆ ಸಂಪೂರ್ಣ ಹಾನಿಗೀಡಾಗಿತ್ತು. ರೈತರು ಅತಿವೃಷ್ಟಿ ನಡುವೆಯೂ ಗೊಬ್ಬರ, ಔಷಧ ನೀಡಿ ಹೆಚ್ಚಿನ ಆರೈಕೆ ಮಾಡಿ ಶೇ. 50ರಷ್ಟು ಬೆಳೆ ಉಳಿಸಿಕೊಂಡಿದ್ದರು. ಕಷ್ಟಪಟ್ಟು ಉಳಿಸಿಕೊಂಡಿದ್ದ ಬೆಳೆಯನ್ನು ಮಾರಾಟಕ್ಕಾಗಿ ಎಪಿಎಂಸಿಗೆ ತಂದಾಗ 1 ಕ್ವಿಂಟಾಲ್ ಉಳ್ಳಾಗಡ್ಡಿ ಬೆಲೆ 800 ರೂ.ಯಿಂದ 150 ರೂ.ವರೆಗೂ ಕುಸಿತವಾಗಿತ್ತು. ಹೀಗಾಗಿ ರೈತರು ಮಾಡಿದ ಖರ್ಚೂ ಹುಟ್ಟುವುದಿಲ್ಲ ಎಂದು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು.

    ಪ್ರಸಕ್ತ ವರ್ಷ ಸಹ ಮಳೆ ಉತ್ತಮವಾಗಿ ಆಗಿದ್ದರಿಂದ ಆರಂಭದಲ್ಲಿ ಬೆಳೆಯೂ ಚೆನ್ನಾಗಿ ಬೆಳೆದಿತ್ತು. ಆದರೆ, ಈಗ ನಿರಂತರವಾಗಿ ಸುರಿಯುತ್ತಿರುವ ಕಾರಣ ಇದೀಗ ಬೆಳೆ ರೋಗಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ವಣವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ, ಸಂಪೂರ್ಣ ಬೆಳೆ ನಾಶವಾಗುವ ಹಂತಕ್ಕೆ ತಲುಪಲಿದೆ ಎಂದು ಉಳ್ಳಾಗಡ್ಡಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ.

    ಸಾವಿರಾರು ರೂ. ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದಿದ್ದೇವೆ. ಆರಂಭದಲ್ಲಿ ಚೆನ್ನಾಗಿ ಬೆಳೆದಿದ್ದ ಉಳ್ಳಾಗಡ್ಡಿ ಈಗ ಗಡ್ಡೆಗಳು ಬೆಳೆಯುವ ಮುನ್ನವೇ ಭೂಮಿಯಿಂದ ಹೊರ ಬೀಳುತ್ತಿವೆ. ಹೀಗಾದರೆ ಬೆಳೆ ಸಂಪೂರ್ಣ ನಾಶವಾಗಲಿದೆ. ಆದ್ದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಬೆಳೆ ಸಂರಕ್ಷಣೆಗಾಗಿ ರೈತರ ನೆರವಿಗೆ ಬರಬೇಕು.

    | ಮಲ್ಲೇಶಪ್ಪ ಎಚ್. ಉಳ್ಳಾಗಡ್ಡಿ ಬೆಳೆಗಾರ

    ನಿರಂತರ ಮಳೆ ಹಾಗೂ ಬೋರಾನ್ ಕೊರತೆಯಿಂದ ಉಳ್ಳಾಗಡ್ಡಿ ಬೆಳೆ ಎಲೆ ಮಚ್ಚೆ ರೋಗಕ್ಕೆ ತುತ್ತಾಗುವಂತಾಗಿದೆ. ಈ ಬಗ್ಗೆ ಕೃಷಿ ವಿಜ್ಞಾನಿಗಳ ಜತೆ ಜಂಟಿಯಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಔಷಧ, ಗೊಬ್ಬರ ಹಾಕುವ ಬಗ್ಗೆ ಸಲಹೆ ನೀಡಲಾಗುತ್ತಿದೆ. ರೈತರು ತೋಟಗಾರಿಕೆ ಇಲಾಖೆಯಿಂದ ಸೂಚಿಸುವ ಸಲಹೆಗಳನ್ನು ಸೂಕ್ತವಾಗಿ ಪಾಲಿಸಿದರೆ, ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದು.

    | ವಿಜಯಲಕ್ಷ್ಮೀ

    ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts