More

    ಉಳ್ಳಾಗಡ್ಡಿ ಫಸಲು ನಾಶಪಡಿಸಿದ ರೈತರು

    ಲಕ್ಷ್ಮೇಶ್ವರ: ಉತ್ತಮ ಬೆಲೆ ಸಿಗದ ಕಾರಣ ಕಟಾವುಗೊಳಿಸಿದ ಉಳ್ಳಾಗಡ್ಡಿ ಫಸಲನ್ನು ರೈತರು ಮತ್ತೆ ಜಮೀನಿಗೆ ಚೆಲ್ಲಿ ಸಾಮೂಹಿಕವಾಗಿ ನಾಶಪಡಿಸಿದ ಘಟನೆ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಉಳ್ಳಾಗಡ್ಡಿ ಬೆಳೆಗಾರ ಪ್ರಕಾಶ ಶಿರಹಟ್ಟಿ ಮಾತನಾಡಿ, ಉಳ್ಳಾಗಡ್ಡಿ ಬೆಳೆಯಲು ಎಕರೆಗೆ ಕನಿಷ್ಠ 40 ಸಾವಿರ ರೂ. ಖರ್ಚು ಮಾಡಿದ್ದೇವೆ. ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಳ, ಕೊಳೆ ರೋಗದಿಂದ ಬಹುತೇಕ ಬೆಳೆ ನಾಶವಾಗಿದೆ. ಅಳಿದುಳಿದ ಬೆಳೆಯನ್ನು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಒಯ್ದರೆ ಗುಣಮಟ್ಟವಿಲ್ಲದ್ದರಿಂದ ಪ್ರತಿ ಕ್ವಿಂಟಾಲ್​ಗೆ 500 ರೂ. ದಿಂದ 1000 ರೂ. ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಬೆಳೆ ನಾಶಪಡಿಸಿ ಹಿಂಗಾರು ಬಿತ್ತನೆಗೆ ಭೂಮಿ ಸಿದ್ಧಪಡಿಸುತ್ತಿದ್ದೇವೆ. ಸರ್ಕಾರ ಪ್ರತಿ ಎಕರೆ ಉಳ್ಳಾಗಡ್ಡಿ ಬೆಳೆ ಹಾನಿಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ರೈತ ಗಂಗನಗೌಡ ಪಾಟೀಲ ಮಾತನಾಡಿ, 4 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದಿದ್ದೇನೆ. ಬೀಜ, ರಸಗೊಬ್ಬರ, ಕ್ರಿಮಿನಾಶಕ, ಆಳಿನ ಖರ್ಚು ಸೇರಿ 1 ಲಕ್ಷ ರೂ. ಖರ್ಚು ಮಾಡಿದ್ದೇನೆ. ರೋಗ ಬಾಧೆ ನಡುವೆಯೇ ದರ ಒಂದಿಷ್ಟು ಚೇತರಿಕೆ ಕಂಡಿದ್ದರಿಂದ ಉಳ್ಳಾಗಡ್ಡಿ ಕಿತ್ತು, ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಒಯ್ಯುವಷ್ಟರಲ್ಲಿ ಕೊಳೆತಿದೆ. ಹೀಗಾಗಿ ಮೂರು ಟ್ರ್ಯಾಕ್ಟರ್ ಉಳ್ಳಾಗಡ್ಡಿಯನ್ನು ಮತ್ತೆ ಹೊಲಕ್ಕೆ ತಂದು ಚೆಲ್ಲಿದ್ದೇನೆ. ಇದಕ್ಕೆಲ್ಲ 30 ಸಾವಿರ ರೂ. ಖರ್ಚಾಗಿದೆ ಎಂದು ಅಲವತ್ತುಕೊಂಡರು.

    ಉಳ್ಳಾಗಡ್ಡಿ ಬೆಳೆಗಾರರಾದ ಮರಬಸಪ್ಪ ಚಿಕ್ಕಣ್ಣವರ, ಲಕ್ಷ್ಮ ಭಂಗಿ, ಸೋಮಪ್ಪ ಹವಳದ, ಮುದಯಪ್ಪ ಹವಳದ, ರಾಮಣ್ಣ ಚಿಕ್ಕಣ್ಣವರ, ಸಿದ್ದು ಹವಳದ, ಈರಪ್ಪ ಭಂಗಿ, ಚಂದ್ರಗೌಡ ಪಾಟೀಲ, ಬಸವಣ್ಣೆಪ್ಪ ಭಂಗಿ, ಮಹಾಂತೇಶ ಹವಳದ, ಚನ್ನಪ್ಪ ಆದಿ ಮತ್ತಿತರರು ಫಸಲು ನಷ್ಟವಾಗಿದ್ದಕ್ಕೆ ಅಲವತ್ತುಕೊಂಡರು.

    ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕು ಸೇರಿ 2970 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಬಡ್ನಿ, ಅಡರಕಟ್ಟಿ ಭಾಗದಲ್ಲಿ ತೇವಾಂಶ ಹೆಚ್ಚಳದಿಂದ 670 ಹೆಕ್ಟೇರ್ ಬೆಳೆ ರೋಗಕ್ಕೆ ತುತ್ತಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿದ್ದಾರೆ. ಬೆಳೆ ಹಾನಿ ಪರಿಹಾರಕ್ಕೆ ರೈತರು ತಹಸೀಲ್ದಾರ್, ಕೃಷಿ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ರೈತರು ಬೆಳೆ ಕಟಾವು ಪೂರ್ವದಲ್ಲಿ ಬೆಳೆ ಸಮೀಕ್ಷೆ ಮಾಡಿಸಿ ಬೆಳೆ ದರ್ಶಕ ಆಪ್​ನಲ್ಲಿ ದಾಖಲಾದ ಬೆಳೆ ವಿವರ ಪರಿಶೀಲಿಸಿ ತಪ್ಪಾಗಿದ್ದರೆ ಈಗಲೇ ಆಕ್ಷೇಪಣೆ ಸಲ್ಲಿಸಬೇಕು.

    | ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts