More

    ಉಳ್ಳಾಗಡ್ಡಿಗೂ ವರುಣನ ಕಾಟ

    ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಉಳ್ಳಾಗಡ್ಡಿಗೆ ರೋಗಬಾಧೆ ಆವರಿಸಿದೆ.

    ತಾಲೂಕಿನಲ್ಲಿ 6200 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಕ್ಷೇತ್ರವಿದೆ. ಅದರಲ್ಲಿ 3200 ಹೆಕ್ಟೇರ್​ನಲ್ಲಿ ಉಳ್ಳ್ಳಾಗಡ್ಡಿ ಬೆಳೆಯಲಾಗಿದೆ. ಮುಖ್ಯವಾಗಿ ಲಕ್ಷ್ಮೇಶ್ವರ, ಪು.ಬಡ್ನಿ, ರಾಮಗೇರಿ, ಬಸಾಪುರ, ಮಾಗಡಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಮಾಡಳ್ಳಿ, ಯತ್ನಳ್ಳಿ ಭಾಗದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಈ ವರ್ಷವೂ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಸಿಗಬಹುದೆಂಬ ಆಶಾಭಾವನೆಯಿಂದ ಪ್ರತಿ ಕೆಜಿ ಬೀಜಕ್ಕೆ 1 ಸಾವಿರ ರೂ.ನಂತೆ ಖರೀದಿಸಿ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದರು. ಪ್ರತಿ ಎಕರೆಗೆ ಅಂದಾಜು 40-50 ಕ್ವಿಂಟಾಲ್ ಬೆಳೆ ಅಂದಾಜು ಹೊಂದಿದ್ದರು. ಆದರೆ, ಸತತವಾಗಿ ಸುರಿದ ಮಳೆಯಿಂದಾಗಿ ಉಳ್ಳಾಗಡ್ಡಿಗೆ ರೋಗ ತಗುಲಿದ್ದು, ಸುಧಾರಿಸಲಾರದಂತಹ ಸ್ಥಿತಿಗೆ ಬಂದಿವೆ. ಇದರಿಂದ ಉಳ್ಳಾಗಡ್ಡಿ ಬೆಳೆದ ರೈತರ ಆಸೆಗೆ ತಣ್ಣೀರೆರಚಿದಂತಾಗಿದೆ.

    ಬೀಜ, ಗೊಬ್ಬರ, ಕ್ರಿಮಿನಾಶಕ, ಆಳಿನ ಖರ್ಚು ಸೇರಿ ಪ್ರತಿ ಎಕರೆಗೆ ಅಂದಾಜು 20 ಸಾವಿರ ರೂ. ಖರ್ಚು ಮಾಡಿದ್ದೇವೆ. ಈಗ ಗಡ್ಡಿ ಕಟ್ಟುವ ಹಂತದಲ್ಲಿ ಏಕಾಏಕಿ ಬೆಳೆಗೆ ವಿಚಿತ್ರ ರೋಗ ಬಂದು ಬೆಳೆ ಹಾಳಾಗಿದೆ. ಕಳೆದ ವರ್ಷ ಕಟ್ಟಿದ್ದ ಬೆಳೆ ವಿಮೆ ಪರಿಹಾರ ನಯಾ ಪೈಸೆಯೂ ಬಂದಿಲ್ಲ. ಆದ್ದರಿಂದ ಉಳ್ಳಾಗಡ್ಡಿ ಬೆಳೆದ ರೈತರಿಗೆ ಸರ್ಕಾರ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ಕಲ್ಪಿಸಬೇಕು ಎಂದು ಪುಟಗಾಂವ್ ಬಡ್ನಿ ಗ್ರಾಮದ ಉಳ್ಳಾಗಡ್ಡಿ ಬೆಳೆಗಾರರಾದ ಸತೀಶಗೌಡ ಪಾಟೀಲ, ಜೋಗೆಪ್ಪ ಅಂಗಡಿ, ಶಿವಪ್ಪ ಹಡಪದ, ದೇವಕ್ಕ ಕಟ್ಟೆಣ್ಣವರ, ವಿಶ್ವನಾಥ ಜೆಲ್ಲಿಗೇರಿ, ಮಂಜುನಾಥ ಕೋಣನತಂಬಿಗಿ, ವಿರೇಂದ್ರ ನೀರಲಗಿ, ಶಿವಾನಂದ ಅತ್ತಿಗೇರಿ, ನಿಂಗನಗೌಡ ಪಾಟೀಲ, ಭರಮಣ್ಣ ಕಟ್ಟೆಣ್ಣವರ, ಮಂಜುನಾಥ ಚನ್ನೂರ, ಪರಮೇಶ್ವರಪ್ಪ ಚೋಟಗಲ್, ಮಿಯ್ಯಾಸಾಬ ಕಳ್ಳಿಮನಿ, ವಾಗೀಶ ಹರದಗಟ್ಟಿ ಮತ್ತಿತತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ತೇವಾಂಶ ಹೆಚ್ಚಳ, ಹವಾಮಾನ ವೈಪರೀತ್ಯ ಮತ್ತು ಪೋಷಕಾಂಶಗಳ ಕೊರತೆಯಿಂದ ಉಳ್ಳಾಗಡ್ಡಿ ಬೆಳೆಗೆ ಮಜ್ಜಿಗೆ ರೋಗ, ಕೊಳೆ ರೋಗ ಕಾಣಿಸಿಕೊಂಡಿದೆ. ಅಲ್ಲದೆ, ಸುಧಾರಿಸಲಾರದಷ್ಟು ಹಾನಿಗೀಡಾಗಿವೆ. ತೋಟಗಾರಿಕೆ, ಕಂದಾಯ ಇಲಾಖೆ ಸಮೀಕ್ಷೆ ಮಾಡಿ ವರದಿಯನ್ನು ಜಂಟಿ ಕೃಷಿ ನಿರ್ದೇಶಕರಿಗೆ ಮತ್ತು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.

    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts