More

    ಉಳುಮೆ ಮಾಡಲು ಮೂಲ ಮಾಲೀಕರ ಪಟ್ಟು

    ರಟ್ಟಿಹಳ್ಳಿ: ಪಟ್ಟಣದ ಬೀಜೋತ್ಪಾದನಾ ಕೇಂದ್ರದ ಭೂಮಿಯಲ್ಲಿ ಮೂಲ ಮಾಲೀಕರು ಭೂಮಿ ಉಳುಮೆ ಮಾಡಬೇಕೆಂದು ಆಗಮಿಸಿದ ವೇಳೆ ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ತಡೆದ ಘಟನೆ ಶುಕ್ರವಾರ ಜರುಗಿತು.

    ಮೂಲ ಮಾಲೀಕ ಪರಮೇಶಪ್ಪ ಕಟ್ಟೇಕಾರ ಮಾತನಾಡಿ, ನಮ್ಮ ಪೂರ್ವಜರು 1967 ರಲ್ಲಿ ಸರ್ವೆ ನಂ. 87 ಮತ್ತು 88ರಲ್ಲಿ ಒಟ್ಟು 29 ಎಕರೆ 10 ಗುಂಟೆ ಭೂಮಿಯನ್ನು ಸರ್ಕಾರಕ್ಕೆ ಮೆಣಸಿನ ಬೀಜೋತ್ಪಾದನೆಗೆ ನೀಡಿದ್ದರು. ಸರ್ಕಾರ ಈ ಭೂಮಿಯಲ್ಲಿ ಮೆಣಸಿನ ಬೀಜ ಉತ್ಪಾದನೆ ಮಾಡದೇ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಮೂಲ ಮಾಲೀಕರಿಗೆ ಯಾವುದೇ ಪರಿಹಾರ ನೀಡದೇ ಸರ್ಕಾರ ಈ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಕುರಿತು ಧಾರವಾಡ ಹೈಕೋರ್ಟ್​ಗೆ ಎಲ್ಲ ಮೂಲ ಮಾಲೀಕರು ಮೊರೆ ಹೋಗಿದ್ದೆವು. ಹೈಕೋರ್ಟ್ ಆದೇಶದಂತೆ ನಾವು ಭೂಮಿಯನ್ನು ಉಳುಮೆ ಮಾಡಲು ಆಗಮಿಸಿದ್ದೆವು. ಅಧಿಕಾರಿಗಳು ನಮ್ಮನ್ನು ತಡೆದಿರುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದರು.

    ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ ಮಾತನಾಡಿ, 1969ರಿಂದ ಈ ಕೃಷಿ ಭೂಮಿಯು ಸಂಪೂರ್ಣವಾಗಿ ಕೃಷಿ ಇಲಾಖೆಯ ಅಧೀನದಲ್ಲಿರುತ್ತದೆ. ಪ್ರಸ್ತುತ ಪಹಣಿಯಲ್ಲಿಯೂ ಕೃಷಿ ಇಲಾಖೆ ಎಂದು ನಮೂದಾಗಿದೆ. ಈ ಭೂಮಿಯಲ್ಲಿ ಪ್ರಸ್ತುತ ಹಸಿರು ಎಲೆ ಗೊಬ್ಬರ ಬೀಜೋತ್ಪಾನೆಯ ವ್ಯವಸಾಯ ಮಾಡಲಾಗಿದೆ. ಇತ್ತೀಚೆಗೆ ಕೃಷಿ ಸಚಿವ ಬಿ.ಸಿ. ಪಾಟೀಲರು, ಈ ಭೂಮಿಯಲ್ಲಿ ರಟ್ಟಿಹಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಮಿನಿವಿಧಾನಸೌಧ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರ ಈ ಭೂಮಿಯನ್ನು ಕೃಷಿ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಈ ಬಗ್ಗೆ ಮೂಲ ಮಾಲೀಕರು ಕೋರ್ಟ್​ಗೆ ಹೋಗಿರುವುದರಿಂದ ಹೈಕೋರ್ಟ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಬಾರದು ಮತ್ತು ಯಾವುದೇ ಕಟ್ಟಡ ಕಾಮಗಾರಿಗಳನ್ನು ಮಾಡಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಆದರೆ, ಆದೇಶದಲ್ಲಿ ಯಾವುದೇ ರೀತಿ ಬೀಜೋತ್ಪಾನೆ ಚಟುವಟಿಕೆ ಮಾಡ ಬಾರದೆಂದು ತಿಳಿಸಿಲ್ಲ. ಆದ್ದರಿಂದ ಈ ಭೂಮಿಯು ಕೃಷಿ ಇಲಾಖೆಯ ಸುಪರ್ದಿಯಲ್ಲಿದೆ ಎಂದು ಹೇಳಿದರು. ಈ ಭೂಮಿಯಲ್ಲಿ ಕೃಷಿ ಇಲಾಖೆ ಯಾವುದೇ ಬೀಜೋತ್ಪಾದನೆ ನಡೆಸದಂತೆ ಆದೇಶಿಸಿದ್ದಲ್ಲಿ ಅಥವಾ ಭೂಮಿ ನಿಮಗೆ ಸೇರಿದ್ದೆಂದು ಯಾವುದೇ ದಾಖಲೆಗಳಿದ್ದಲ್ಲಿ ಹಾಜರು ಪಡಿಸುವಂತೆ ಮೂಲ ಮಾಲೀಕರಿಗೆ ಕೃಷಿ ನಿರ್ದೇಶಕ ಮಂಜುನಾಥ ಸಲಹೆ ನೀಡಿದರು. ತಹಸೀಲ್ದಾರ್ ಕೆ. ಗುರು ಬಸವರಾಜ, ಸಿಪಿಐ ಮಂಜುನಾಥ ಪಂಡಿತ್, ಪಿಎಸ್​ಐ ಆರ್. ಆಶಾ, ಮಂಜುನಾಥ ಮುದಿಯಪ್ಪನವರ, ರವೀಂದ್ರ ಮುದಿಯಪ್ಪನವರ, ವೀರಪ್ಪ ಮುದಿಯಪ್ಪನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts