More

    ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆಗಿಲ್ಲ ಉತ್ಸಾಹ, ಸುಮಾರು 20 ಮಿಲಿಯನ್ ಲೀಟರ್ ಸಂಸ್ಕರಣಾ ಘಟಕ ಸ್ಥಾಪನೆಗೆ 2016ರಲ್ಲಿ ಯೋಜನೆ ಸಿದ್ದ

    ಕಣ್ಣಳತೆಯಲ್ಲಿ ಜಲರಾಶಿ ಹೊಂದಿರುವ ವಿಶಾಲ ಕಡಲು ಇದ್ದರೂ ಅದರ ನೀರನ್ನು ಇತರ ರಾಜ್ಯ, ದೇಶದಲ್ಲಿ ಬಳಸುವಂತೆ ಮಂಗಳೂರಿಗೆ ಬಳಸಲು ಇನ್ನೂ ಸಾಧ್ಯವಾಗಿಲ್ಲ. ಭವಿಷ್ಯದ ಮಂಗಳೂರಿಗೆ ಅನಿವಾರ್ಯವಾಗಿರುವ ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆ ಸಿದ್ದಗೊಂಡಿದ್ದರೂ ಸದ್ಯಕ್ಕೆ ಪ್ರಸ್ತಾವನೆಯಾಗಿಯೇ ಉಳಿದಿದೆ.

    ಚೆನ್ನೈಯ ಮಿಂಜೂರು ಮಾದರಿಯಲ್ಲಿ ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಿಸಿ ಕುಡಿಯುವ ಹಾಗೂ ಕೈಗಾರಿಕೆಗಳಿಗೆ ನೀಡುವ ಪ್ರಸ್ತಾವನೆ 2010ರಲ್ಲಿ ಸಿದ್ದಗೊಂಡಿತ್ತು. ಆದರೆ ಈ ಪ್ರಸ್ತಾವಣೆಗೆ ಸರ್ಕಾರದಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರು 2016ರ ಮೇ 25 ರಂದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಂಗಳೂರಿನಲ್ಲಿರುವ ಕೈಗಾರಿಕೆಗಳ ಸಭೆ ಕರೆದು ಸಮುದ್ರದ ನೀರು ಸಂಸ್ಕರಿಸಿ ನೀರು ಪಡೆಯುವ ಬಗ್ಗೆ ಕಾರ್ಯಯೋಜನೆ ರೂಪಿಸುವ ಚರ್ಚೆ ನಡೆಸಿದ್ದರು. ಪಿಪಿಪಿ ಮಾದರಿಯಲ್ಲಿ ಸುಮಾರು 20 ಮಿಲಿಯನ್ ಲೀಟರ್ ಸಂಸ್ಕರಣಾ ಘಟಕ ಸ್ಥಾಪನೆಗೆ 95 ರಿಂದ 100 ಕೋ.ರೂ. ಅವಶ್ಯವಿದೆ. ಈ ಯೋಜನೆಗೆ 1 ರಿಂದ 2 ಎಕರೆ ನಿವೇಷನ ಅಗತ್ಯವಾಗಿದ್ದು, ಯೊಜನಾ ಅನುಷ್ಠಾನಕ್ಕೆ ಎಲ್ಲಾ ಪೂರ್ವಭಾವಿ ಪ್ರಕ್ರಿಯೆಗಳು ಮುಗಿದ ಬಳಿಕ 18 ರಿಂದ 20 ತಿಂಗಳೊಳಗೆ ಘಟಕ ನಿರ್ಮಾಣ ಮುಗಿದು ಕಾರ್ಯಾಚರಣೆ ಪ್ರಾರಂಭಿಸಬಹುದು ಎಂದು ಅಂದಾಜಿಸಲಾಗಿತ್ತು. ಜಿಲ್ಲಾಡಳಿತದ ಈ ಯೋಜನೆಗೆ ಯಾವುದೇ ಖಾಸಗಿ ಸಂಸ್ಥೆ ಸಹಭಾಗಿತ್ವ ಪಡೆಯಲು ಮುಂದೆ ಬಂದಿಲ್ಲ, ಆದರೆ ಮುಂದಕ್ಕೆ ಈ ಪ್ರಸ್ತಾವ ಪ್ರಸ್ತಾವಣೆಯಾಗಿಯೇ ಉಳಿಯಿತು.

    *ತಣ್ಣೀರುಬಾವಿ ಘಟಕ ಕೈಗಾರಿಕಾ ಬಳಕೆಗೆ ಮಾತ್ರ

    ಎಂಆರ್‌ಪಿಎಲ್ ವತಿಯಿಂದ ತಣ್ಣೀರುಬಾವಿಯಲ್ಲಿ ಉಪ್ಪುನೀರು ಸಂಸ್ಕರಣಾ ಘಟಕ ಆಗಿದ್ದರೂ ಇದೇ ಸ್ವರೂಪದಲ್ಲಿ ಜನರ ಬಳಕೆಗೆ ಬೇಕಾದ ಘಟಕ ನಿರ್ಮಾಣಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆ ಅನುಷ್ಠಾನಕ್ಕೆ ಮಂಗಳೂರಿನ ತಲಪಾಡಿಯಿಂದ ಮೂಲ್ಕಿವರೆಗೆ ಇರುವ 42 ಕಿ.ಮಿ ಸಮುದ್ರ ತೀರ ಇದಕ್ಕೆ ಪೂರಕವಾಗಿದೆ. ಈಗಾಗಲೇ ದ.ಕ.ಜಿಲ್ಲೆಯಲ್ಲಿ ಅಂತರ್ಜಲ ಕುಸಿತವಾಗಿದೆ. 600-700 ಅಡಿವರೆಗೆ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಈಗಾಗಲೇ ಪರ್ಯಾಯ ನೀರಿನ ಮೂಲವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸಮುದ್ರ ನೀರು ಸಂಸ್ಕರಣೆ ಮಂಗಳೂರಿಗೆ ಅಗತ್ಯವಾಗಿರುವ ಹೊಸ ಯೋಜನೆ. ನೀರಿಗೆ ಪರ್ಯಾಯ ಮೂಲವಾಗಿ ಸಮುದ್ರದ ಸಂಸ್ಕರಿತ ನೀರು ಬಳಕೆ ವಿದೇಶದಲ್ಲೂ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ.

    —————

    ಚೆನ್ನೈಯ ಮಿಂಜೂರು ದೇಶದ ಅತಿ ದೊಡ್ಡ ಘಟಕ

    ಚೆನ್ನೈಯ ಮಿಂಜೂರು ಉಪ್ಪುನೀರು ಸಂಸ್ಕರಣಾ ಘಟಕ ದೇಶದ ಅತಿ ದೊಡ್ಡ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 60 ಎಕರೆ ಪ್ರದೇಶ ತಲೆಯೆತ್ತಿರುವ ಘಟಕ 2010ರಿಂದ ಕಾರ್ಯಾಚರಿಸುತ್ತಿದ್ದು ದಿನವೊಂದಕ್ಕೆ 100 ಮಿಲಿಯನ್ ಲೀಟರ್ ಕುಡಿಯುವ ಸಂಸ್ಕರಿತ ನೀರು ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. ಪಿಒಪಿ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದು ಚೆನ್ನೈ ನಗರದಲ್ಲಿ ಭಾಗಶ: ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸಮುದ್ರ ನೀರಿನ್ನು ಸಂಸ್ಕರಿಸಿಯೇ ಕುಡುಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದೇ ರೀತಿಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಭಾರತದ ಅತೀ ದೊಡ್ಡ ಉಪ್ಪು ನೀರು ಸಂಸ್ಕರಣಾ ಘಟಕ ಕಾರ್ಯಾಚರಿಸುತ್ತಿದೆ.

    ——————-

    ಭವಿಷ್ಯದ ಮಂಗಳೂರಿಗೆ ಅನಿವಾರ್ಯ

    ಮಂಗಳೂರು ಪರಿಧಿಯಲ್ಲಿ 15 ಬೃಹತ್ ಉದ್ದಿಮೆಗಳಿಗೆ ಎಎಂಆರ್ ಹಾಗೂ ಇತರೆ ನೀರಿನ ಮೂಲದಿಂದ ನೀರು ಪೂರೈಕೆಯಾಗುತ್ತದೆ. ಸಧ್ಯಕ್ಕೆ ಎಎಂಆರ್ ನೀರು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದೆ. ಮಂಗಳೂರು ಎಸ್‌ಇಝಡ್‌ನಲ್ಲಿ ಹಾಗೂ ಎಂಆರ್‌ಪಿಎಲ್‌ನ ನಾಲ್ಕನೆ ಹಂತದ ವಿಸ್ತರಣೆಯಲ್ಲಿ ಇನ್ನಷ್ಟು ಉದ್ದಿಮೆ ಬರಲಿವೆ. ಸುಮಾರು 6 ರಿಂದ 8 ಸಾವಿರದ ವರೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವುಗಳಿಗೆ ಬಹುತೇಕ ನೀರಿನ ಮೂಲ ನೇತ್ರಾವತಿ ನದಿ, ಪಲ್ಗುಣಿ ನದಿ. ಈ ನಿಟ್ಟಿನಲ್ಲಿ ಭವಿಷ್ಯದ ಮಂಗಳೂರಿಗೆ ಉಪ್ಪುನೀರು ಸಂಸ್ಕರಣಾ ಘಟಕ ಅನುಷ್ಠಾನ ಅಗತ್ಯ.

    ——————-

    ಎಂಆರ್‌ಪಿಎಲ್ ವತಿಯಿಂದ ತಣ್ಣೀರುಬಾವಿಯಲ್ಲಿ ಉಪ್ಪುನೀರು ಸಂಸ್ಕರಣಾ ಘಟಕ ಇದೆ. ಇದನ್ನು ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿದೆ. ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆ ಅನುಷ್ಠಾನಕ್ಕೆ ಇಲ್ಲಿ ಸಾಕಷ್ಟು ಅವಕಾಶ ಇದೆ. ಈಬಗ್ಗೆ ಹಲವು ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು.

    ಮುಲ್ಲೈ ಮುಗಿಲನ್

    ಜಿಲ್ಲಾಧಿಕಾರಿ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts