More

    ವೆಟ್‌ವೆಲ್ ತ್ಯಾಜ್ಯ ಹೊಳೆಗೆ!

    ವೇಣುವಿನೋದ್ ಕೆ.ಎಸ್. ಮಂಗಳೂರು

    ಮಾನವ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಬದಲು ಖಾಸಗಿ ಸೀವೇಜ್ ಮೂವಿಂಗ್ ಲಾರಿಗಳು ತೋಡು, ತೆರೆದ ಚರಂಡಿಗೆ ಬಿಡುವ ಮೂಲಕ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿವೆ.
    ನಗರದ ಕೂಳೂರು ಬಳಿಯ ವಿಶೇಷ ಆರ್ಥಿಕ ವಲಯದ ಕಾರಿಡಾರ್ ರಸ್ತೆ ಬದಿಯಲ್ಲೇ ತೋಡಿಗೆ ಈ ಕಲ್ಮಶ ಬಿಡುವ ಮೂಲಕ ತೋಡಿನ ನೀರನ್ನು ಮಲಿನಗೊಳಿಸುವುದಷ್ಟೇ ಅಲ್ಲ, ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿಸುವ ಕೃತ್ಯಕ್ಕೆ ಹಲವು ಸೀವೇಜ್ ಮೂವಿಂಗ್ ಸಂಸ್ಥೆಗಳು ಕಾರಣವಾಗಿವೆ. ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ಹಲವು ಉದ್ಯಮಿಗಳು, ಕಾರ್ಮಿಕರು, ಎಂಆರ್‌ಪಿಎಲ್ ಮೂರನೇ ಹಂತ, ಜೋಕಟ್ಟೆಗೆ ತೆರಳುವವರೂ ಇದೇ ಭಾಗದಲ್ಲಿ ಸಂಚರಿಸುತ್ತಾರೆ. ಅವರೆಲ್ಲರ ಆರೋಗ್ಯಕ್ಕೂ ಇದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
    ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಐದಾರು ಬಾರಿ ಹಲವು ಲಾರಿಗಳಲ್ಲಿ ಮಲ, ಮೂತ್ರ ಸಹಿತ ಮಾನವ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈಗಾಗಲೇ ಇಲ್ಲಿ ಹರಿಯುವ ತೋಡಿನಲ್ಲಿ ಕೈಗಾರಿಕೆಯ ತ್ಯಾಜ್ಯಯುಕ್ತ ನೀರು ಹರಿಯುತ್ತದೆ. ಅದರೊಂದಿಗೆ ಮಾನವ ತ್ಯಾಜ್ಯವೂ ಸೇರಿದ ನೀರು ಅಪಾಯಕಾರಿಯಾಗಿದ್ದು ಸಂಸ್ಕರಣೆಗೊಳಪಡದೆ ಅನತಿ ದೂರದಲ್ಲಿ ಫಲ್ಗುಣಿ ನದಿಗೆ ಸೇರುತ್ತದೆ. ಈ ಬಗ್ಗೆ ಕೆಲವು ಸ್ಥಳೀಯ ಉದ್ಯಮ ಸಂಸ್ಥೆಯ ಪ್ರತಿನಿಧಿಗಳು ಪ್ರಶ್ನಿಸಿದಾಗ ಅವರನ್ನೇ ಬೆದರಿಸಿರುವುದಾಗಿಯೂ ಮಾಹಿತಿ ಸಿಕ್ಕಿದೆ.

    ಏನು ಮಾಡಬೇಕು?
    ವಾಸ್ತವವಾಗಿ ಪಿಟ್‌ಗಳಿಂದ ಸಂಗ್ರಹಿಸುವ ಮಾನವ ತ್ಯಾಜ್ಯವನ್ನು ವೆಟ್‌ವೆಲ್‌ಗಳಿಗೆ ಕೊಂಡೊಯ್ದು ಹಾಕಬೇಕು. ಅಲ್ಲಿಂದ ಅದು ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್‌ಗೆ ಹೋಗಿ ಸಂಸ್ಕರಣೆಯಾಗುತ್ತದೆ. ಈ ಸೀವೇಜ್ ಮೂವರ್ಸ್‌ ಲಾರಿಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ನೀಡಲಾಗುತ್ತದೆ. ನಿಯಮ ಉಲ್ಲಂಘಿಸಿ ಲಾರಿಗಳು ಎಲ್ಲೆಂದರಲ್ಲಿ ತೆರೆದ ಚರಂಡಿ, ತೋಡುಗಳಿಗೆ ತ್ಯಾಜ್ಯ ನೀರು ಬಿಡುತ್ತಿದ್ದಾರೆ. ನಗರ ಮಧ್ಯೆ ದುರ್ವಾಸನೆ ಬಂದರೆ ಸ್ಥಳೀಯ ನಿವಾಸಿಗಳು ಆಕ್ಷೇಪಿಸುತ್ತಾರೆ ಎಂಬ ಕಾರಣಕ್ಕೆ ನಗರದಿಂದ ಹೊರಗಿರುವ ಈ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನೀರು ಬಿಡಲಾಗುತ್ತಿದೆ.

    ಇದೇ ನೀರಿನಿಂದ ಮೀನು!
    ಇದೇ ಕೊಳಚೆ ಹರಿಯುವ ತೋಡಿನಲ್ಲೇ ಕೆಲವು ಮಂದಿ ಮೀನು ಹಿಡಿಯುವುದು ಕಂಡುಬಂದಿದೆ. ಈ ಮಾಲಿನ್ಯಕಾರಕ ನೀರಿನಲ್ಲಿರುವ ಇ-ಕೊಲಿಯಂಥ ಬ್ಯಾಕ್ಟೀರಿಯಾಗಳು ಮಾನವ ದೇಹಕ್ಕೆ ಸೇರಿದರೆ ಹಲವು ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

    ಕದ್ದು ಮುಚ್ಚಿ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿರುವುದು ಸರಿಯಲ್ಲ. ಈ ಲಾರಿಗಳಿಗೆ ಅನುಮತಿ ನೀಡುವವರು ಮಂಗಳೂರು ಮಹಾನಗರ ಪಾಲಿಕೆಯವರು. ವೆಟ್‌ವೆಲ್‌ಗಳಿಗೆ ತ್ಯಾಜ್ಯ ಸಾಗಿಸಬೇಕಿತ್ತು. ಇದನ್ನು ಉಲ್ಲಂಘಿಸಿದ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಗಮನಕ್ಕೆ, ಆರ್‌ಟಿಗೆ ತಿಳಿಸಿ ಈ ಲಾರಿಗಳನ್ನು ವಶಕ್ಕೆ ಪಡೆಯಲು ಸೂಚಿಸಲಾಗುವುದು.
    ಕೀರ್ತಿ ಕುಮಾರ್
    ಪರಿಸರ ಅಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts