More

    ಉಪ್ಪಾಗೆ ಇಳುವರಿ ಅಪಾರ ಕುಸಿತ

    ರಾಜೇಂದ್ರ ಶಿಂಗನಮನೆ ಶಿರಸಿ

    ಮಳೆಗಾಲದಲ್ಲಿ ಗ್ರಾಮೀಣ ಜನರ ಆದಾಯ ಮೂಲವಾಗಿದ್ದ ಉಪ್ಪಾಗೆ ಇಳುವರಿಯಲ್ಲಿ ಪ್ರಸಕ್ತ ವರ್ಷ ಭಾರಿ ಕುಂಠಿತವಾಗಿದೆ. ಹೀಗಾಗಿ ಉಪ್ಪಾಗೆ ಸಂಗ್ರಹಕಾರರ ಜತೆ ಗ್ರಾಮ ಅರಣ್ಯ ಸಮಿತಿಗಳು ಹಾಗೂ ಅರಣ್ಯ ಇಲಾಖೆಯ ಆದಾಯಕ್ಕೆ ಪೆಟ್ಟು ಬೀಳುವುದು ನಿಶ್ಚಿತವಾಗಿದೆ.

    ಮಲೆನಾಡಿನ ಪ್ರಮುಖ ಬೆಳೆಗಳಾದ ಅಡಕೆ, ತೆಂಗುಗಳ ಜತೆಗೆ ಉಪಬೆಳೆಯಾಗಿ ಉಪ್ಪಾಗೆ ರೈತರ ಕೈ ಹಿಡಿದಿದೆ. ಅರಣ್ಯವನ್ನೇ ನಂಬಿಕೊಂಡು ಬದುಕುತ್ತಿರುವ ವನವಾಸಿ ಜನಾಂಗ, ಅರಣ್ಯವಾಸಿಗಳು ಹಾಗೂ ಗ್ರಾಮೀಣ ಭಾಗದ ಶೇ. 30ರಷ್ಟು ಜನರು ಅರಣ್ಯ ಉತ್ಪನ್ನಗಳನ್ನು ತಮ್ಮ ಆದಾಯದ ಮೂಲವಾಗಿ ಬಳಸಿಕೊಂಡಿವೆ. ಇದರಲ್ಲಿ ಮುಖ್ಯವಾಗಿ ಗಾರ್ಸಿನಿಯಾ ಪ್ರಭೇದಕ್ಕೆ ಸೇರಿದ ಉಪ್ಪಾಗೆ ಅತಿ ಹೆಚ್ಚು ಆದಾಯವನ್ನು ನೀಡುತ್ತಿರುವ ಬೆಳೆಯಾಗಿದೆ. ಆದರೆ, ಈ ಬಾರಿ ಆದಾಯ ಇಳಿಕೆಯ ಭೀತಿ ಸಂಗ್ರಹಕಾರರದ್ದಾಗಿದೆ. ಉಪ್ಪಾಗೆ ಇಳುವರಿಯಲ್ಲಿ ಶೇ. 60ರಷ್ಟು ಇಳಿಕೆಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

    ಗರಿಷ್ಠ 1 ಸಾವಿರ ಟನ್: ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕ ಕಾಡುಗಳ ಮೂಲದಿಂದ 1,500 ಟನ್ ಹಾಗೂ ಕೃಷಿ ಮೂಲದಿಂದ 750 ಟನ್ ಉಪ್ಪಾಗೆ ಸಿಪ್ಪೆಯ ಸಂಗ್ರಹಣೆ ವಾರ್ಷಿಕವಾಗಿ ನಡೆಯುತ್ತಿತ್ತು. ಜಿಲ್ಲೆಯಲ್ಲಿ ಅಂದಾಜು 5,077 ಗ್ರಾಮ ಅರಣ್ಯ ಸಮಿತಿಗಳಿದ್ದು, ಇವುಗಳಲ್ಲಿ

    ಶೇ. 30ರಷ್ಟು ಸಮಿತಿಗಳು ಉಪ್ಪಾಗೆ ಸಿಪ್ಪೆಯ ಸಂಗ್ರಹಣೆಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದವು. ಆದರೆ, ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ಇತರ ಕಾರಣಕ್ಕೆ ಸಮಿತಿ ವ್ಯಾಪ್ತಿ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಿಂದ ಗರಿಷ್ಠ 1 ಸಾವಿರ ಟನ್ ಉಪ್ಪಾಗೆ ಸಿಪ್ಪೆ ಸಂಗ್ರಹವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ, ಸಾಕಷ್ಟು ಆದಾಯ ಗಳಿಸುತ್ತಿದ್ದ ಅರಣ್ಯ ಸಮಿತಿಗಳು, ಸ್ವಂತ ಶ್ರಮದಿಂದ ಸಂಗ್ರಹಿಸುತ್ತಿದ್ದ ಗ್ರಾಮೀಣ ಜನರು ಹಾಗೂ ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

    ಲಾಭಕ್ಕಿಂತ ನಷ್ಟವೇ ಜಾಸ್ತಿ: ಗ್ರಾಮ ಅರಣ್ಯ ಸಮಿತಿ ರಚನೆಯ ನಂತರ ಸಮಿತಿ ವ್ಯಾಪ್ತಿಯ ಉಪ್ಪಾಗೆ ಉತ್ಪನ್ನ ಹೊರಗಿಟ್ಟು ಉಳಿದ ಅರಣ್ಯದ ಉತ್ಪನ್ನ ನೇರವಾಗಿ ಇಲಾಖೆ ಗುತ್ತಿಗೆ ಮೂಲಕ ನಿರ್ವಹಿಸಲಾಗುತ್ತಿದೆ. ಈ ಪ್ರಕಾರ ಗುತ್ತಿಗೆ ಪಡೆದ ಗುತ್ತಿಗೆದಾರರು ಈ ಬಾರಿ ನಷ್ಟದ ಭೀತಿಯಲ್ಲಿದ್ದಾರೆ. ಅಲ್ಪಸ್ವಲ್ಪ ಉತ್ಪನ್ನವನ್ನು ಸಂಗ್ರಹಿಸಲು ಕೃಷಿ ಕೂಲಿಕಾರ್ವಿುಕರ ಅಭಾವ, ಸಂಗ್ರಹದ ಹಿಂದಿನ ದುಬಾರಿ ಕಾರ್ಯಗಳು ಹಾಗೂ ಮಾರುಕಟ್ಟೆಯಲ್ಲಿ ಅಸ್ಥಿರ ದರದ ಕಾರಣ ಕಾಡೊಳಗೆ ಹೋಗಲು ಗುತ್ತಿಗೆದಾರರು ಹಿಂದೇಟು ಹಾಕುವ ಸ್ಥಿತಿ ನಿರ್ವಣವಾಗಿದೆ. ಇಳುವರಿ ಇಲ್ಲದ ವರ್ಷ ಉಪ್ಪಾಗೆ ಸಂಗ್ರಹಕ್ಕೆ ಹೋದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬುದು ಗುತ್ತಿಗೆದಾರರ ಅಭಿಪ್ರಾಯ.

    ಇಲಾಖೆ ಆದಾಯದಲ್ಲಿಯೂ ಇಳಿಕೆ ಸಾಧ್ಯತೆ
    ಗ್ರಾಮ ಅರಣ್ಯ ಸಮಿತಿ (ವಿಎಫ್​ಸಿ) ಪ್ರದೇಶ ಹೊರತುಪಡಿಸಿ ಪ್ರತಿ ವರ್ಷ ಸಂಗ್ರಹವಾದ ಉಪ್ಪಾಗೆ ಮಾರಾಟದಿಂದ ಶಿರಸಿ ವಿಭಾಗಕ್ಕೆ ಲಕ್ಷಾಂತರ ರೂಪಾಯಿ ಆದಾಯ ಇಲಾಖೆಗೆ ಆವಾಗುತ್ತದೆ. ಅದರಂತೆ 2013-14ನೇ ಸಾಲಿನಲ್ಲಿ ಶಿರಸಿ, ಜಾನ್ಮನೆ, ಹುಲೇಕಲ್, ಸಿದ್ದಾಪುರ ಹಾಗೂ ಕ್ಯಾದಗಿ ಅರಣ್ಯ ವಲಯದಿಂದ ಒಟ್ಟು 495 ಟನ್ ಉಪ್ಪಾಗೆ ಸಂಗ್ರಹವಾಗಿದ್ದು, 25.49 ಲಕ್ಷ ರೂ., 14-15ನೇ ಸಾಲಿನಲ್ಲಿ 495 ಟನ್​ನಿಂದ 25.49 ಲಕ್ಷ ರೂ. ಆದಾಯವಾಗಿತ್ತು. 2015-16ನೇ ಸಾಲಿನಲ್ಲಿ ಉತ್ಪನ್ನದ ಪ್ರಮಾಣದಲ್ಲಿ ಇಳಿಕೆಯಾಗಿ 440 ಟನ್​ಗಳಿಂದ 21.04 ಲಕ್ಷ ರೂ. ಹಾಗೂ 2016-17, 17-18 ಹಾಗೂ 18-19ರಲ್ಲಿ ಕ್ರಮವಾಗಿ 440 ಟನ್​ನಿಂದ 21.04 ಲಕ್ಷ ರೂ. ಸಂಗ್ರಹವಾಗಿತ್ತು. ಈ ಬಾರಿ ಇಳುವರಿ ಪ್ರಮಾಣ ಕುಂಠಿತ ಆಗಿರುವುದರಿಂದ ಇಲಾಖೆಗೆ ಬರುವ ಆದಾಯ ಪ್ರಮಾಣದಲ್ಲೂ ಸಾಕಷ್ಟು ಕಡಿಮೆ ಆಗುವ ಸಾಧ್ಯತೆಯಿದೆ.

    ಹವಾಮಾನ ವೈಪರೀತ್ಯ ದಿಂದ ಇಳುವರಿ ಕುಂಠಿತ ಆಗುತ್ತದೆ. ಜತೆಗೆ, ಜೇನು, ದುಂಬಿಗಳ ನಾಶದಿಂದ ಪರಾಗಸ್ಪರ್ಶ ಪ್ರಕ್ರಿಯೆಗೆ ತೊಡಕಾಗಿದೆ. ಇದು ಕೂಡ ಇಳುವರಿ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಇನ್ನು ಉಪ್ಪಾಗೆ ಗಿಡ ನೆಟ್ಟು ಬೆಳೆಸುವ ಕೆಲಸ ಕೆಲವು ಕಡೆಗಳಲ್ಲಿ ನಡೆದಿದ್ದು ಇದು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಅರಣ್ಯ ನೆಡುತೋಪುಗಳಲ್ಲಿ ಈ ಸಸ್ಯ ಸಂರಕ್ಷಣೆಯ ಕಾಯಕ ಆಗಿಲ್ಲ. ಉಪ್ಪಾಗೆಯ ಎಲ್ಲ ಮರಗಳಿಂದಲೂ ಹಣ್ಣನ್ನು ಆರಿಸುವುದರಿಂದ ಸಸ್ಯೋತ್ಪಾದನೆಯೂ ಆಗದೆ ನೈಸರ್ಗಿಕ ಸಸಿಗಳೂ ವಿರಳವಾಗುತ್ತಿವೆ.
    | ಪಾಂಡುರಂಗ ಹೆಗಡೆ ಪ್ರಕೃತಿ ಸಂಸ್ಥೆ ಮುಖ್ಯಸ್ಥ

    ಎರಡ್ಮೂರು ವರ್ಷಗಳಿಂದ ಉಪ್ಪಾಗೆ ಇಳುವರಿ ಕಡಿಮೆಯಾಗುತ್ತಿದ್ದು, ಈ ಬಾರಿ ಅರ್ಧಕ್ಕಿಂತ ಕಡಿಮೆಯಾಗಿದೆ. ಒಂದೆರಡು ಮರಗಳಿಂದ ಕ್ವಿಂಟಾಲ್ ಸಿಪ್ಪೆ ಸಂಗ್ರಹಿಸುತ್ತಿದ್ದವರಿಗೆ ಈ ವರ್ಷ ನಷ್ಟವಾಗಿದೆ. ಸಾಕಷ್ಟು ಓಡಾಟ, ಕೂಲಿ ಸಂಖ್ಯೆ ಹೆಚ್ಚಳವಾಗಿದ್ದು, ಸಂಗ್ರಹಣೆ ದುಬಾರಿಯಾಗಿ ಮಾರ್ಪಟ್ಟಿದೆ.
    | ಸತೀಶ ಹೆಗಡೆ ಉಪ್ಪಾಗೆ ಸಂಗ್ರಹಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts