More

    ಉದ್ಯೋಗ ಖಾತ್ರಿ ಕಾಮಗಾರಿ ಸ್ಥಗಿತ ಖಂಡಿಸಿ ಪ್ರತಿಭಟನೆ

    ಲಕ್ಷೆ್ಮೕಶ್ವರ: ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಎರಡು ದಿನಗಳಿಂದ ನರೇಗಾ ಕಾಮಗಾರಿಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ನೂರಾರು ಕೂಲಿ ಕಾರ್ವಿುಕರು ಬುಧವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಮಂಗಳವಾರ ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕೂಲಿಕಾರರಿಗೆ, ‘ಇವತ್ತು ದೇವಿ ವಾರ ಮಾಡಲಾಗಿದ್ದು, ಕೆಲಸ ನಿಲ್ಲಿಸಲಾಗಿದೆ’ ಎಂದು ಹೇಳಿ ಮರಳಿ ಮನೆಗೆ ಕಳುಹಿಸಲಾಗಿತ್ತು. ಬುಧವಾರ ಬೆಳಗ್ಗೆ 7 ಗಂಟೆಗೆ ಆಗಮಿಸಿದ್ದ ರೈತ ಕೂಲಿ ಕಾರ್ವಿುಕರನ್ನು 10 ಗಂಟೆವರೆಗೆ ಕಾಯಿಸಿ ಪಿಡಿಒ ಆಗಮಿಸಿದ ಬಳಿಕ ಇಂದು ಸಹ ಕೂಲಿ ಕೆಲಸ ಇಲ್ಲವೆಂದು ಹೇಳಿದ್ದಾರೆ. ಇದರಿಂದ ಅಕ್ರೋಶಗೊಂಡ ಜನರು ಪಂಚಾಯಿತಿ ಎದುರು ಗುದ್ದಲಿ, ಸಲಿಕೆ, ಬುಟ್ಟಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಪಿಡಿಒಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡು ‘ಇಂದು ಕೂಲಿ ಕೆಲಸ ಪ್ರಾರಂಭಿಸದ ಹೊರತು ಇಲ್ಲಿಂದ ಹೋಗುವದಿಲ್ಲ’ ಎಂದು ಪಟ್ಟು ಹಿಡಿದರು.

    ಪಿಡಿಒ ಜೆ.ಆರ್. ಕುರುಬರ ಮಾತನಾಡಿ, ಉದ್ಯೋಗ ಖಾತ್ರಿ ಕಾಮಗಾರಿಗೆ ಇನ್ನೂ ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿಲ್ಲ. ಅಲ್ಲದೆ, ಇದು ಬಿತ್ತನೆ ಸಮಯವಾಗಿದ್ದರಿಂದ ಹೊಲದಲ್ಲಿ ನರೇಗಾ ಕಾಮಗಾರಿ ಮಾಡಬಾರದು ಎಂದು ರೈತರು ಅಡ್ಡಿಪಡಿಸುತ್ತಿದ್ದಾರೆ. ಸದ್ಯ ನರೇಗಾದಲ್ಲಿ ರೈತರ ಬದು ನಿರ್ವಣಕ್ಕೆ ಅವಕಾಶ ಇರುವುದರಿಂದ ಬಹಳಷ್ಟು ರೈತರು ಈ ಕಾಮಗಾರಿ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗುರುವಾರದಿಂದ ಮತ್ತೆ ಕಾಮಗಾರಿ ಪ್ರಾರಂಭಿಸುತ್ತೇವೆ. ರೈತರು ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.

    ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ದಿನ ಕೆಲಸ ಕೊಡಲೇಬೇಕು. ಇಲ್ಲದಿದ್ದರೆ ಇಲ್ಲಿಂದ ಹೊರಡುವುದಿಲ್ಲ ಎಂದು ಪಟ್ಟುಹಿಡಿದರು.

    ಒತ್ತಾಯಕ್ಕೆ ಮಣಿದ ಪಿಡಿಒ: ಕಾರ್ವಿುಕರ ಒತ್ತಾಯಕ್ಕೆ ಮಣಿದ ಪಿಡಿಒ ಜೆ.ಆರ್. ಕುರುಬರ, ಸಮೀಪದ ಹಳ್ಳದಲ್ಲಿ ಕಾಮಗಾರಿ ಪ್ರಾರಂಭಿಸುವುದಕ್ಕೆ ಸಮ್ಮತಿ ಸೂಚಿಸಿದರು. ಆಗ ರೈತ ಕೂಲಿ ಕಾರ್ವಿುಕರು ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹೋದರು.

    ಗ್ರಾ.ಪಂ. ಸದಸ್ಯರಾದ ಮಹೇಶ ಕುಬಟಿ, ದೇವಣ್ಣ ಬೆಟಗೇರಿ, ಶೇಖಣ್ಣ ಕಾಳೆ ಹಾಗೂ ರೈತ ಕೂಲಿ ಕಾರ್ವಿುಕರಾದ ಕುಮಾರ ಬೆಟಗೇರಿ, ಗಂಗಾಧರ ಬಡಿಗೇರ, ದೇವಪ್ಪ ಗಾಂಜಿ, ಗಂಗಪ್ಪ ಪೂಜಾರ, ಫಕೀರಪ್ಪ ಗೋಂದಿ, ರೇಣುಕಾ ರಟಗೇರಿ, ನೀಲವ್ವ ಅಜ್ಜಣ್ಣವರ, ಶಾಂತವ್ವ ಕಾಳೆ, ಶಿವಲಿಂಗವ್ವ ಮೂಶಪ್ಪನವರ, ತುಳಸಮ್ಮ ಜಿಡ್ಡಿಮನಿ, ಲಕ್ಷ್ಮವ್ವ ಜಿಡ್ಡಿಮನಿ, ನಾಗತ್ನ ಜಿಡ್ಡಿಮನಿ, ಸತ್ಯವ್ವ ಬಿಚಗತ್ತಿ, ಇತರರು ಇದ್ದರು.

    ಗ್ರಾ.ಪಂ. ವ್ಯಾಪ್ತಿಯ ಎಲ್ಲರಿಗೂ ನಿತ್ಯ ಕೆಲಸ ಕೊಡುವಂತೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ಕೃಷಿ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಮತ್ತು ಪಿಡಿಒಗೆ ಸೂಚಿಸಿದ್ದೇನೆ.
    | ಡಾ. ಎನ್.ಎಚ್. ಓಲೇಕಾರ ತಾ.ಪಂ. ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts