More

    ಉತ್ತರ ಕ್ಷೇತ್ರದ ಹಕ್ಕುಪತ್ರ ನೀಡಲು ವಿಳಂಬ  -ವಸತಿರಹಿತರ ದಿಢೀರ್ ಧರಣಿ -ಪಾಲಿಕೆಯ ಬಿಜೆಪಿ ಸದಸ್ಯರ ನೇತೃತ್ವ

    ದಾವಣಗೆರೆ: ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ನಿವೇಶನ ಹಕ್ಕುಪತ್ರ ನೀಡದ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಮೀನಮೇಷ ವಿರೋಧಿಸಿ ಪಾಲಿಕೆಯ ಬಿಜೆಪಿ ಸದಸ್ಯರ ನೇತೃತ್ವದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸತಿ ರಹಿತರು ನಗರಪಾಲಿಕೆ ಎದುರು ಶನಿವಾರ ದಿಢೀರ್ ಧರಣಿ ನಡೆಸಿದರು.
    ಲೋಕಾಯುಕ್ತ ದೂರಿಗೆ ಒಳಪಟ್ಟ ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಹೆಗಡೆ ನಗರ ನಿವಾಸಿಗಳಿಗೆ ಇಂದು ಹಕ್ಕುಪತ್ರ ನೀಡಲಾಗುತ್ತಿದೆ. ದಾವಣಗೆರೆ ಉತ್ತರ ಕ್ಷೇತ್ರದ ವಿಚಾರದಲ್ಲಿ ತಾರತಮ್ಯ ಏಕೆ? ಇಲ್ಲಿನ ಬಡವರು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪಾಲಿಕೆಯ ಬಿಜೆಪಿ ಸದಸ್ಯರು ಪ್ರಶ್ನಿಸಿದರು.
    2023ರ ಜನವರಿ ತಿಂಗಳಲ್ಲೇ ಆಶ್ರಯ ಸಮಿತಿ ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ 987 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ರಾಜೀವ್‌ಗಾಂಧಿ ನಿಗಮದಿಂದ ಅನುಮೋದನೆಗೊಂಡು ಮಾರ್ಚ್‌ನಲ್ಲಿ ನಿಗಮದ ಹಕ್ಕುಪತ್ರಗಳೂ ಬಂದಿದ್ದವು. 6 ತಿಂಗಳಾದರೂ ವಿತರಣೆ ಮಾಡಲಾಗಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
    ಇದಕ್ಕಾಗಿ ಬನ್ನಿಕೋಡು, ಸಾಲಕಟ್ಟೆ, ಬೇವಿನಹಳ್ಳಿ ಸರ್ವೇ ನಂಬರ್‌ಗೆ ಒಳಪಟ್ಟ 25 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ನಂತರದಲ್ಲಿ ಇದೀಗ ಲೋಕಾಯುಕ್ತ ಮೊಕದ್ದಮೆ ನೆಪ ಹೂಡಲಾಗುತ್ತಿದೆ. ಇದರು ಸರಿಯಲ್ಲ ಎಂದರು.
    ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಾನುಭವಿಗಳ ಅರ್ಹತೆ ಪ್ರಶ್ನಿಸಿ ಸಾರ್ವಜನಿಕರೊಬ್ಬರು 2022ರ ಜುಲೈನಲ್ಲಿ ಲೋಕಾಯುಕ್ತರಿಗೆ ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ದಾವಣಗೆರೆ ಉತ್ತರ ಕ್ಷೇತ್ರದ ಸಂಬಂಧಿತ ನಿವೇಶನ ಹಕ್ಕುಪತ್ರಗಳ ನಿರ್ಧಾರ ಈ ವರ್ಷವಾಗಿದೆ. ಲೋಕಾಯುಕ್ತ ದೂರು ಇದಕ್ಕೆ ಅನ್ವಯವಾಗದಿದ್ದರೂ ಹಕ್ಕುಪತ್ರ ಹಂಚಿಕೆಗೆ ತಡೆಯೇಕೆ? ಎಂದು ಪ್ರಶ್ನಿಸಿದರು.
    ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಗಡೆ ನಗರದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದ 243 ಜನರಿಗೆ ಇಂದು ಹಕ್ಕುಪತ್ರ ನೀಡಲಾಗುತ್ತಿದೆ. ಆದರೆ ಅದೇ ಕ್ಷೇತ್ರದ 1400 ಫಲಾನುಭವಿಗಳಿಗೇಕೆ ಹಕ್ಕುಪತ್ರ ನೀಡುತ್ತಿಲ್ಲ. ಅವರೂ ಬಡವರಲ್ಲವೆ? ಅವರಿಗೂ ಕೂಡಲೆ ವಿತರನೆ ಮಾಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
    ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಆಯುಕ್ತೆ ಎನ್. ರೇಣುಕಾ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ನಿರ್ದೇಶನ ಪಡೆದು ಹಕ್ಕುಪತ್ರಗಳನ್ನು ವಿತರಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ತೆರವು ಮಾಡಿದ ಬಿಜೆಪಿ ಸದಸ್ಯರು ಸಂಜೆ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿದರು ಎನ್ನಲಾಗಿದೆ.
    ಧರಣಿ ವೇಳೆ ಉಪಮೇಯರ್ ಯಶೋದಾ ಹೆಗ್ಗಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಸದಸ್ಯರಾದ ಕೆ.ಎಂ.ವೀರೇಶ್, ಆರ್. ಶಿವಾನಂದ್, ವೀಣಾ ನಂಜಪ್ಪ, ರೇಖಾ ಸುರೇಶ್ ಗಂಡಗಾಳೆ, ಮುಖಂಡರಾದ ಸುರೇಶ್, ಜಯಪ್ರಕಾಶ್ ಹಾಗೂ ನಿವೇಶನ ರಹಿತ ನಗರ ವಾಸಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts