More

    ಉತ್ತರ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಸೋಮವಾರವೂ ಮಳೆಯಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಹೋಗುತ್ತಿತ್ತು. ಕಾರವಾರದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸಾಯಂಕಾಲ ಭಾರಿ ಮಳೆ ಸುರಿದಿದೆ.

    ಮಳೆ ವಿವರ: ಸೋಮವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 22.2 ಮಿಮೀ, ಭಟ್ಕಳದಲ್ಲಿ 24, ಹಳಿಯಾಳದಲ್ಲಿ 18.6, ಹೊನ್ನಾವರದಲ್ಲಿ 47.1, ಕಾರವಾರದಲ್ಲಿ 14.4, ಕುಮಟಾದಲ್ಲಿ 26.6, ಮುಂಡಗೋಡಿನಲ್ಲಿ 17.4, ಸಿದ್ದಾಪುರದಲ್ಲಿ 22.6, ಶಿರಸಿಯಲ್ಲಿ 7, ಜೊಯಿಡಾದಲ್ಲಿ 31.8, ಯಲ್ಲಾಪುರದಲ್ಲಿ 18.6, ಮಿಮೀ ಮಳೆಯಾಗಿದೆ.

    ಕಡಲ ಅಬ್ಬರ: ಅರಬ್ಬಿ ಸಮುದ್ರದಲ್ಲಿ ಜೂನ್ 5ರವರೆಗೆ ಗಂಟೆಗೆ 45 ರಿಂದ 85 ಕಿಮೀ ವೇಗದವರೆಗೂ ಗಾಳಿ ಬೀಸಬಹುದು. ಕಡಲು ಪ್ರಕ್ಷುಬ್ಧಗೊಂಡು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಕಾರವಾರ, ಭಟ್ಕಳ ಸೇರಿ ವಿವಿಧೆಡೆ ಕಡಲ ಅಬ್ಬರ ಹೆಚ್ಚಿದೆ.

    ಮುಂಡಗೋಡ-ಯಲ್ಲಾಪುರ ಸಂಪರ್ಕ ಕಡಿತ
    ಮುಂಡಗೋಡ:
    ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಶಿಡ್ಲಗುಂಡಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ವಿುಸಿದ ರಸ್ತೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ಶಿಡ್ಲಗುಂಡಿ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ನಂತರ ಪಿಡಬ್ಲು್ಯಡಿಯವರು ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದರು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಮಳೆಯಾದ್ದರಿಂದ ನೀರಿನ ಹರಿವು ಹೆಚ್ಚಾಗಿ ಶಿಡ್ಲಗುಂಡಿಯ ತಾತ್ಕಾಲಿಕ ರಸ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಸದ್ಯ ಮುಂಡಗೋಡ-ಯಲ್ಲಾಪುರ ಸಂಪರ್ಕ ಕಡಿತಗೊಂಡಿದೆ. ತಾಲೂಕಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ಮುಂಡಗೋಡದ ಹೊಸ ಓಣಿ ಬಡಾವಣೆಯ ಸತೀಶ ಯಲ್ಲಾಪುರ ಎಂಬುವರ ಮನೆಯ ಆವರಣದೊಳಗೆ ಸೋಮವಾರ ಚರಂಡಿ ನೀರು ನುಗ್ಗಿದೆ.

    ತೇಲಿ ಹೋದ ಸಸಿಗಳು
    ಮುಂಡಗೋಡ:
    ತಾಲೂಕಿನ ಅಜ್ಜಳ್ಳಿ ಮತ್ತು ಚಿಗಳ್ಳಿ ಭಾಗದಲ್ಲಿ ಒಣ ಬಿತ್ತನೆ ಮಾಡಿದ್ದ ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಸಸಿಗಳು ತೇಲಿ ಹೋಗಿವೆ. ಅಂದಾಜು 20 ಎಕರೆಯಷ್ಟು ಬಿತ್ತನೆ ಮಾಡಿದ ಗದ್ದೆಯಲ್ಲಿ ನೀರು ನುಗ್ಗಿ ಹಾನಿಯಾಗಿದೆ. ಚಿಗಳ್ಳಿ ಗ್ರಾಮದ ಸಂತೋಷ ಆಲದಕಟ್ಟಿ ಎಂಬುವರ 5 ಎಕರೆ ಭತ್ತದ ಸಸಿ, ರಾಮು ಕುಸೂರ ಎಂಬುವರ ಒಂದೂವರೆ ಎಕರೆ ಭತ್ತ, ಅಜ್ಜಳ್ಳಿ ಗ್ರಾಮದ ಕಲ್ಮೇಶ ಆಲದಕಟ್ಟಿ ಎಂಬುವರ 2 ಎಕರೆ ಭತ್ತ, ಪವನ ಕುಸೂರ ಎಂಬುವರ 3 ಎಕರೆ ಭತ್ತ ಮತ್ತು 2 ಎಕರೆ ಗೋವಿನ ಜೋಳದ ಸಸಿ, ಅಜ್ಜಳ್ಳಿಯ ಎಂ.ಪಿ. ಕುಸೂರ ಎಂಬುವರ ಎರಡೂವರೆ ಎಕರೆ ಭತ್ತ ಮತ್ತು 3 ಎಕರೆ ಗೋವಿನ ಜೋಳದ ಸಸಿಗಳು ನೀರು ಪಾಲಾಗಿವೆ. ಗದ್ದೆಯ ಮೇಲಿನ ಮಣ್ಣೆಲ್ಲ ಕೊಚ್ಚಿಕೊಂಡು ಹೋಗಿದ್ದು ಸದ್ಯಕ್ಕೆ ಬಿತ್ತನೆಗೂ ಸಾಧ್ಯವಿಲ್ಲ ಮತ್ತು ನಾಟಿ ಮಾಡಲೂ ಆಗುವುದಿಲ್ಲ ಎಂದು ಚಿಗಳ್ಳಿಯ ರೈತ ಸಂತೋಷ ಆಲದಕಟ್ಟಿ ತಮ್ಮ ನೋವು ತೋಡಿಕೊಂಡಿದ್ದಾರೆ. ಅಜ್ಜಳ್ಳಿ ಅರಣ್ಯ ಭಾಗದಲ್ಲಿರುವ ಕಾಲುವೆಯಿಂದ ನೀರು ಹರಿದು ಸಾಲಗಾಂವ ಬಾಣಂತಿ ದೇವಿ ಕೆರೆ ಸೇರುತ್ತದೆ. ಪ್ರತಿ ವರ್ಷ ಮಳೆ ಹೆಚ್ಚಾದಾಗ ಇದೇ ರೀತಿಯಾಗಿ ನೀರು ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts