More

    ಉತ್ತಮ ವ್ಯಕ್ತಿಗಳ ಗೆಲುವಿಗೆ ಶ್ರಮಿಸಿ

    ಶಿರಸಿ: ಹಣ, ಹೆಂಡಕ್ಕಾಗಿ ಮತ ಮಾರಿಕೊಳ್ಳದೆ ಬಡವರು, ಸಾಮಾಜಿಕ ನ್ಯಾಯದ ಪರವಾಗಿರುವ ವ್ಯಕ್ತಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

    ನಗರದ ವಿನಾಯಕ ಸಭಾಂಗಣದಲ್ಲಿ ಜರುಗಿದ ಬನವಾಸಿ ಬ್ಲಾಕ್​ನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಯಮವನ್ನು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಪಾಲಿಸಬೇಕು. ಪಂಚಾಯಿತಿ ಚುನಾವಣೆ ಎಲ್ಲದಕ್ಕೂ ಅಡಿಪಾಯವಾಗಿದೆ. ಪಂಚಾಯಿತಿ ವ್ಯವಸ್ಥೆ ಬಲಪಡಿಸಿದ್ದು ಕಾಂಗ್ರೆಸ್ ಪಕ್ಷ. ಭಾಷಣ ಮಾಡಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಪಕ್ಷದ ಶಿಸ್ತನ್ನು ಯಾರು ಉಲ್ಲಂಘಿಸಬಾರದು ಎಂದರು.

    ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್​ನ ಹೊಸ ಯುಗ ಪ್ರಾರಂಭವಾಗುತ್ತಿದೆ. ಜಿಲ್ಲೆಯ 231 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು ನಾವೆಲ್ಲರೂ ಕಂಕಣಬದ್ಧರಾಗಬೇಕು. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದೆ. ಪಕ್ಷದ ಆಸ್ತಿಯಾಗಿರುವ ಕಾರ್ಯಕರ್ತರನ್ನು ಗೆಲ್ಲಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

    ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು ಎಂದರು.

    ಈ ವೇಳೆ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಪ್ರಮುಖರಾದ ನಿವೇದಿತ್ ಆಳ್ವಾ, ರವಿ ನಾಯ್ಕ ಕಲಕರಡಿ, ಸತೀಶ ನಾಯ್ಕ, ಸುನೀಲ ನಾಯ್ಕ ಮತ್ತಿತರರು ಹಾಜರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಮನಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts