More

    ಉತ್ತಮ ಜೀವನಕ್ಕೆ ಬೇಕು ವೃತ್ತಿ ಕೌಶಲ  – ಸುರೇಶ ಬಿ. ಇಟ್ನಾಳ್ -ದಾವಿವಿಯಲ್ಲಿ ಕ್ರೀಡೋತ್ಸವ

    ದಾವಣಗೆರೆ: ವಿದ್ಯಾರ್ಥಿಗಳು ಓದಿಗೆ ಸೀಮಿತವಾಗದೆ ಸಾಹಿತ್ಯ ಮತ್ತು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ವೃತ್ತಿ ಕೌಶಲಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಹೇಳಿದರು.
    ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿಕೂಟ ಶಿವಗಂಗೋತ್ರಿ ಕ್ರೀಡೋತ್ಸವ-2023 ಅಂತರ ವಿಭಾಗಗಳ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
    ದೇಶದಲ್ಲಿ ಒಂದೆಡೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ಹೊಸ ಮಾದರಿಯ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಕರ್ನಾಟಕ ಹೊಸ ಉದ್ಯಮಶೀಲಗಳ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿದ್ದರೂ ಕೌಶಲಗಳು ಅತಿಮುಖ್ಯ ಎಂದು ಹೇಳಿದರು.
    ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಬಿಟ್ಟು ತೊಲಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸದ್ಯದಲ್ಲೇ ನನ್ನ ಮಣ್ಣು, ನನ್ನ ದೇಶ (ಮೇರಾ ಮಿಟ್ಟಿ ಮೇರಾ ದೇಶ್ ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾನಿಲಯದ ಪ್ರತಿ ವಿದ್ಯಾರ್ಥಿಯೂ ಸಂಗ್ರಹಿಸುವ ಅವರ ಊರಿನ ಮಣ್ಣನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಈ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದರು.
    ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ತರಗತಿಯಲ್ಲಿ ಕಲಿಯುವ ಪಾಠ ಜ್ಞಾನಾರ್ಜನೆಯನ್ನು ಬೆಳೆಸಿದರೆ, ಕ್ರೀಡೆಗಳು ದೈಹಿಕ ಸಬಲತೆಯನ್ನು ಬೆಳೆಸುತ್ತವೆ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾಸಕ್ತಿಯ ವಾತಾವರಣವಿದ್ದರೆ, ಕ್ರೀಡಾಂಗಣದಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧಗಳು ವೃದ್ಧಿಯಾಗಿ ಆತ್ಮೀಯತೆ, ಸ್ನೇಹತ್ವ ಬೆಳೆಸಲಿವೆ ಎಂದರು.
    ಜ್ಞಾನಾರ್ಜನೆಗೆ ದೈಹಿಕ ಆರೋಗ್ಯವೂ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ, ಸದೃಢ ದೇಶಕ್ಕಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
    ಕುಲಸಚಿವೆ ಬಿ.ಬಿ.ಸರೋಜಾ, ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ ಉಪಸ್ಥಿತರಿದ್ದರು. ಡಾ.ಅಶೋಕಕುಮಾರ ಪಾಳೇದ ಸ್ವಾಗತಿಸಿದರು. ಡಾ.ಶಾರದಾ ಕಳ್ಳಿಮನಿ ವಂದಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪಥ ಸಂಚಲನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts