More

    ಉಗ್ರ ನಿಗ್ರಹಕ್ಕೆ ಮುಂದಾಗಿದ್ದೇ ಮುಳುವಾಯ್ತು : ಗಾಂಧಿ, ಇಂದಿರಾ, ರಾಜೀವ್ ಹತ್ಯೆಗೆ ಅದೇ ಕಾರಣ

    ಚಿಕ್ಕಬಳ್ಳಾಪುರ: ಮತೀಯ ವಾದಿಗಳು ಮತ್ತು ಭಯೋತ್ಪಾದಕರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯಾಗುತ್ತಿರಲಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ವಿಮರ್ಶಿಸಿದರು.
    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹುತಾತ್ಮ ದಿನ, ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಉಗ್ರ ಸಂಘಟನೆಗೆ ಕಡಿವಾಣ ಹಾಕಲು ಶ್ರೀಲಂಕಾಗೆ ಭಾರತೀಯ ಸೇನೆಯನ್ನು ಕಳಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಭಯೋತ್ಪಾದಕರ ಸಂಚಿಗೆ ರಾಜೀವ್ ಗಾಂಧಿ ಬಲಿಯಾದರು. ಮತೀಯವಾದಿಗಳು ಗಾಂಧಿಯನ್ನು ಗುಂಡಿಕ್ಕಿ ಕೊಂದರು. ಪಂಜಾಬ್‌ನಲ್ಲಿ ಭಯೋತ್ಪಾದಕರ ಅಟ್ಟಹಾಸದ ವಿರುದ್ಧ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಹುತಾತ್ಮರಾಗಬೇಕಾಯಿತು. ಒಂದು ವೇಳೆ ಇವರು ರಾಜಿಯಾಗಿದ್ದಲ್ಲಿ ಬಲಿಯಾಗುತ್ತಿರಲಿಲ್ಲ ಎಂದರು.
    ಸಭೆಯಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಕೆ.ಪಿ.ಬಚ್ಚೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ಕಾವ್ಯಾ ಮತ್ತಿತರರು ಇದ್ದರು.

    ಭದ್ರತೆಯಲ್ಲಿ ಮಾರಕ ನೀತಿ: ಇತ್ತೀಚೆಗೆ ದೇಶದಲ್ಲಿ ಬಲಿದಾನಗೈದವರ ವಿಚಾರಗಳು, ತತ್ವ ಸಿದ್ಧಾಂತಗಳಿಗೆ ಧಕ್ಕೆ ಉಂಟಾಗುತ್ತಿದೆ. ಕೋಮು ಸಾಮರಸ್ಯ ಹದಗೆಡುತ್ತಿದೆ. ದೇಶದ ಭದ್ರತೆಯಲ್ಲಿ ಮಾರಕ ನೀತಿ ಅನುಸರಿಸುತ್ತಿದ್ದು, ಈಗಾಗಲೇ ಶ್ರೀಲಂಕಾ, ನೇಪಾಳದಂತಹ ಸಣ್ಣಪುಟ್ಟ ರಾಷ್ಟ್ರಗಳು ಮುನಿಸಿಕೊಂಡು ವಿರೋಧಿಸುತ್ತಿವೆ ಎಂದು ಉಗ್ರಪ್ಪ ಆರೋಪಿಸಿದರು.

    ಚುನಾವಣಾ ಸಂದೇಶ ಸಾರಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 18ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿ.ಎಸ್.ಉಗ್ರಪ್ಪ ಭವಿಷ್ಯ ನುಡಿದರು. ದೇಶದಲ್ಲಿನ ಜನವಿರೋಧಿ ಆಡಳಿತವನ್ನು ಕಂಡಿರುವ ಜನ ಈ ಬಾರಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ಮುಕ್ತ ಭಾರತ ನಿರ್ಮಾಣಕ್ಕೆ ಕರೆ ನೀಡಿದವರಿಗೆ ಬಿಸಿಮುಟ್ಟಿಸುವ ರೀತಿಯಲ್ಲಿ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಪಕ್ಷವನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಇದೇ ಮಾದರಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲೂ ಸಂದೇಶ ಸಾರಬೇಕಾಗಿದೆ ಎಂದು ತಿಳಿಸಿದರು.


    ಸಹಕಾರಿ ಕಾಯ್ದೆಗೆ ತಿದ್ದುಪಡಿ, ಮಾರಕ ಎಪಿಎಂಸಿ ಕಾಯ್ದೆ ರದ್ದು ಸೇರಿ ಜನಪರ ತೀರ್ಮಾನ ಕೈಗೊಳ್ಳಲು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಲ ಅಡ್ಡಿಯಾಗಿದೆ. ಇದಕ್ಕೆ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಲು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು.
    ಎಂ.ಎಲ್.ಅನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ


    ಇತರ ಸಾಮಾನ್ಯ ಚುನಾವಣೆಗಳ ಮಾದರಿಯಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯೂ ಹದಗೆಟ್ಟಿದೆ. ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಒಳ್ಳೆಯವರ ಆಯ್ಕೆಗೆ ಆದ್ಯತೆ ನೀಡಬೇಕು.
    ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ, ಬಾಗೇಪಲ್ಲಿ


    ವಿಧಾನ ಪರಿಷತ್ ಚುನಾವಣೆಯಲ್ಲಿ ಪಂಚಾಯಿತಿವಾರು ಮತದಾರರನ್ನು ಗುರುತಿಸಿ, ಸರ್ಕಾರದ ಜನಪರ ಕೆಲಸಗಳ ಬಗ್ಗೆ ಅರಿವು ಮೂಡಿಸಬೇಕು. ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
    ಕೆ.ಎಚ್.ಪುಟ್ಟಸ್ವಾಮಿಗೌಡ, ಶಾಸಕ, ಗೌರಿಬಿದನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts