More

    ಈ ಬಾರಿ ಚಾರ್‌ ಸೌ ಪಾರ್‌ ಅಲ್ಲ, ಗಡಿಪಾರ್‌

    ಬಾಗಲಕೋಟೆ: ಇತಿಹಾಸ ಇಲ್ಲದ ಪಕ್ಷ ಬಿಜೆಪಿ. ಯಾವುದೇ ಅಭಿವೃದ್ಧಿ ಕೆಲಸ ಇಲ್ಲದೆ ಧರ್ಮ-ಧರ್ಮಗಳ ನಡುವೆ ಸಂಘರ್ಷ ಸೃಷ್ಟಿ ಮಾಡುವ ಬಿಜೆಪಿಯನ್ನು ಈ ಬಾರಿ ಕಿತ್ತೊಗೆಯಬೇಕು ಎಂದು ಶಾಸಕ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಹೇಳಿದರು.

    ಹುನಗುಂದದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕ‍ರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಚಾರ ಸಭೆಗಳಲ್ಲಿ ಈ ಬಾರಿ ಚಾರ್‌ ಸೌ ಪಾರ್‌ (ನಾಲ್ಕೂ ನೂರಕ್ಕೂ ಹೆಚ್ಚು) ಎಂದು ಹೇಳುತ್ತಿದ್ಧಾರೆ. ಆದರೆ ನೀವು ಅವರಿಗೆ ಗಡಿಪಾರ್‌ ಎಂದು ಹೇಳಬೇಕು. ಬಿಜೆಪಿ ಅಭ್ಯರ್ಥಿಗಳು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿಲ್ಲ. ಮೋದಿಗಾಗಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಕೆಲಸ ಮಾಡಿದ್ದರೆ ತಾನೆ ಅವರು ತಮ್ಮ ಹೆಸರಿನಲ್ಲಿ ಮತ ಕೇಳುವುದು ಎಂದು ವ್ಯಂಗ್ಯವಾಡಿದರು.

    ಸಂಸದ ಪಿ.ಸಿ. ಗದ್ದಿಗೌಡರ್‌ 20 ವರ್ಷ ಸಂಸದರಾಗಿ ಬಾಗಲಕೋಟ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ತಾಕತ್ತಿದ್ದರೆ ಸಂಸದರು ತಮ್ಮ ಸಾಧನೆಗಳನ್ನು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

    ಹುನಗುಂದ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಅವರು ಲಘುವಾಗಿ ಮಾತನಾಡುತ್ತಿದ್ದಾರೆ. ಯೋಗ್ಯತೆ ಇರುವುದರಿಂದಲೇ ಕ್ಷೇತ್ರದ ಮತದಾರರು 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. 4,500 ಕೋಟಿ ರೂ. ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಬಗ್ಗೆ ಅವರು ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ದನಿದ್ದೇನೆ ಎಂದು ಹೇಳಿದರು.

    ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿಯಾಗಲಿದೆ. ಮೀಸಲಾತಿಗಳು ರದ್ದಾಗಲಿವೆ. ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಬರಲಿದೆ. ಹೀಗಾಗಿ ಮತದಾರರು ಎಚ್ಚರ ವಹಿಸಬೇಕು ಎಂದು ಹೇಳಿದರು.

    ಸಂಯುಕ್ತ ಪಾಟೀಲ ಹುನಗುಂದದ ಮಗಳು. ಈ ಚುನಾವಣೆಯಲ್ಲಿ ಅವರಿಗೆ ನಾನು ಗಳಿಸಿದ ಮುನ್ನಡೆಗಿಂತ ಹತ್ತು ಸಾವಿರ ಹೆಚ್ಚುವರಿ ಮತಗಳನ್ನು ಕೊಡಿಸುತ್ತೇನೆ. ಬಸವಣ್ಣನ ನಾಡಿನಲ್ಲಿ ಹುಟ್ಟಿದವರು ನಾವು. ನುಡಿದಂತೆ ನಡೆಯುತ್ತೇವೆ. ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಈಗಾಗಲೇ ಕಾರ್ಯಕ್ರಮ ರೂಪಿಸಿದ್ದೇವೆ.  ನಮ್ಮ ಪಡೆ ಚುನಾವಣೆಗೆ ಸಜ್ಜಾಗಿದೆ ಎಂದು ಹೇಳಿದರು.

    ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್.‌ಜಿ. ನಂಜಯ್ಯನಮಠ, ಶಾಸಕರಾದ ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ವಿಧಾನಪರಿಷತ್‌ ಸದಸ್ಯ ಸುನಿಲ್‌ಗೌಡ ಪಾಟೀಲ, ಮತ್ತಿತರರು ಮಾತನಾಡಿದರು. ಬಿಜೆಪಿ ಮುಕಂಡ ಸಿದ್ದು ಕೊಣ್ಣೂರು, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ. ಸೌದಾಗಾರ್‌ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts