More

    ಇನ್ನೂ 10 ವರ್ಷ ರಾಜಕೀಯದಲ್ಲಿ ಸಕ್ರಿಯ; ಹೋರಾಟ ಮಾಡಿ ಬಿಜೆಪಿ ಕಟ್ಟಿದ್ದೇನೆ: ಬಿ.ಎಸ್.ಯಡಿಯೂರಪ್ಪ

    ಹೊಸನಗರ: ವಿವಿಧ ಪಾದಯಾತ್ರೆಗಳ ಮೂಲಕ ಪಕ್ಷ ಕಟ್ಟಿದ್ದೇನೆ. ನನ್ನ ಹೋರಾಟದ ದಿನಗಳಲ್ಲಿ ನಮ್ಮ ಶಾಸಕರೇ ಇರಲಿಲ್ಲ. ಆದರೆ ಅಂದಿನ ಹೋರಾಟ ಫಲ ಇಂದು ಅಧಿಕಾರ ನಡೆಸುವಂತಾಗಿದೆ. ದೇವರು ಆಯುಷ್ಯ ಕೊಟ್ಟರೆ ಇನ್ನು ಎರಡು ಅವಧಿಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಆಶಯ ಹೊಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
    ತಾಲೂಕಿನ ಬ್ರಹ್ಮೇಶ್ವರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಮ್ಮಿಕೊಂಡಿದ್ದ 3 ಕೋಟಿ ರೂ. ವೆಚ್ಚದ ಮುಂದುವರಿದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಮುದಾಯದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಹೋರಾಟದ ದಿನದಲ್ಲಿ ಶಾಸಕರಾಗಿದ್ದವರು ನಾನು ಮತ್ತು ದಕ್ಷಿಣ ಕನ್ನಡದ ವಸಂತ ಬಂಗೇರ. ಆದರೆ ಇಂದು ಹಳ್ಳಿ ಹಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರ ಪಡೆ ಸದೃಢವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಂಡ ಮಹಾನ್ ಪುರುಷ. ದಣಿವರಿಯದ ನಾಯಕರಾಗಿದ್ದು ಅವರ ಅಡಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಸಮೃದ್ಧ ಭಾರತ ಕಟ್ಟಬೇಕಾಗಿದೆ ಎಂದರು.
    ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವೇ ಸಿಎಂ ಆಗುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ ನಾಯಕರಿದ್ದಾರೆ. ಮತ್ತೊಮ್ಮೆ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಎಂದು ಮಾಜಿ ಸಿಎಂ ಲೇವಡಿ ಮಾಡಿದರು. ರಾಜ್ಯದಲ್ಲಿ ಬಿಜೆಪಿ 140 ಸ್ಥಾನ ಗಳಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಮಳಲಿ ಮಠದ ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜಕೀಯ, ದಿಟ್ಟತನ, ಅಭಿವೃದ್ಧಿ, ಸರ್ವ ಸಮಾಜದ ಬಗ್ಗೆ ಅವರಿಗಿರುವ ತುಡಿತದ ಗಮನ ಸೆಳೆದು ಮೆಚ್ಚುಗೆ ವ್ಯಕ್ತಪಡಿಸಿದರು.
    ಹೋರಾಟದಿಂದ ಮೂಡಿ ಬಂದ ಜನನಾಯಕ: ಇಂದಿನ ರಾಜಕಾರಣದಲ್ಲಿ ಪತ್ರಿಕೆಗಳಿಗೆ ಹೇಳಿಕೆ ನೀಡಿದ ಮಾತ್ರದಲ್ಲಿ ನಾನೊಬ್ಬ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಹಲವರಿದ್ದಾರೆ. ಆದರೆ ನಮ್ಮ ಯಡಿಯೂರಪ್ಪ ಹೋರಾಟದಿಂದ ಮೂಡಿ ಬಂದ ನಿಜವಾದ ಜನನಾಯಕ. ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಸಿಎಂ ಆಗುವ ಮುನ್ನ ಅಭಿವೃದ್ಧಿಗೆ ಲಕ್ಷ ಸಿಕ್ಕರೆ ಅದೇ ದೊಡ್ಡ ಪುಣ್ಯ. ಆದರೆ ಅವರು ಬಂದ ಮೇಲೆ ಲಕ್ಷಗಳೆಲ್ಲ ಕೋಟಿಗಳಾಗಿ ಪರಿವರ್ತನೆಯಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬಿ.ವೈ.ರಾಘವೇಂದ್ರ ಮಾದರಿಯಾಗಿದ್ದಾರೆ. ಕೇಂದ್ರದಿಂದ ಇಷ್ಟೊಂದು ಅನುದಾನ ತರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಮಾತು, ನಡವಳಿಕೆಯಲ್ಲಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ನಮ್ಮ ರಾಜ್ಯದ ಹಲವಷ್ಟು ಮುಖ್ಯಮಂತ್ರಿಗಳ ಮಕ್ಕಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದಾರೆ. ಅಂದಾಜು ಮಾಡಲು ಆಗದ ರೀತಿಯಲ್ಲಿ ಅವರ ಚಟುವಟಿಕೆಗಳಿವೆ. ನಾನು ಗೃಹಮಂತ್ರಿಯಾಗಿ ಅವರ ಸಂಪೂರ್ಣ ಜಾತಕ ತಿಳಿದಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ಅಪವಾದವಾಗಿದ್ದಾರೆ ಎಂದು ಹೇಳಿದರು.
    ಅಪತ್ಕಾಲದ ನಾಯಕ:  ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಲಾಗಿದೆ. ಕೇಂದ್ರದಲ್ಲಿ ಸಮಸ್ಯೆ ಎದುರಾದಾಗ ಕೇಂದ್ರ ಸರ್ಕಾರ ಗಮನ ಸೆಳೆಯುವಲ್ಲಿ ಅವರ ನೇತೃತ್ವದಲ್ಲಿ ಕಾರ್ಯಸಿದ್ಧಿಯಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ದಿನ ಪಟಗುಪ್ಪದ ಹಣ ಹಾಸನಕ್ಕೆ ರೇವಣ್ಣ ಕೊಂಡೊಯ್ದಿದ್ದರು. ಇದನ್ನರಿತ ನಾನು ಮಾಜಿ ಸಿಎಂ ಯಡಿಯೂರಪ್ಪರ ಮೊರೆ ಹೋಗಿ, ಕೇಂದ್ರ ಸರ್ಕಾರದಿಂದ ಮತ್ತೆ ಯೋಜನೆ ಚಾಲನೆಗೊಳಿಸಲು ಸಾಧ್ಯವಾಯಿತು. ಯಡಿಯೂರಪ್ಪ ಕಾಲದಲ್ಲಿ ಎಲ್ಲ ಮಠಮಾನ್ಯಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲ ಜನಾಂಗದ ಹಿತ ಕಾಯಲಾಗಿದೆ. ಹಾಗಾಗಿ ಸರ್ವ ಜನಾಂಗದ ನಾಯಕರಾಗಿ ಜನರ ಮನಸ್ಸಿನಲ್ಲಿ ನಲೆಸಿದ್ದಾರೆ ಎಂದು ಹೇಳಿದರು.
    ಮಗನಿಗೆ ಸ್ವಾಗತ ಕೋರಿದ ಮಾಜಿ ಸಿಎಂ: ಕಾರ್ಯಕ್ರಮಕ್ಕೆ ರಾಘವೇಂದ್ರ ಆಗಮಿಸುವಾಗ ತಡವಾಗಿತ್ತು. ಕಾರ್ಯಕ್ರಮದ ಮುಗಿಯುವ ಹೊತ್ತಿನಲ್ಲಿ ಯಡಿಯೂರಪ್ಪ ಭಾಷಣ ಮಾಡುತ್ತಿದ್ದರು. ಲೋಕಸಭಾ ಸದಸ್ಯರು ಬರುತ್ತಿದ್ದಂತೆ ಖುದ್ದು ಯಡಿಯೂರಪ್ಪ ಅವರು ಸ್ವಾಗತ ಕೋರಿದರು. ಈವೇಳೆ ಸಭಿಕರಿಂದ ಚಪ್ಪಾಳೆ ಹರಿದು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts