More

    ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬಾ ಜಾತ್ರೆಗೆ ಅದ್ದೂರಿ ಚಾಲನೆ; ಒಂಬತ್ತು ದಿನ ಧಾರ್ಮಿಕ, ಸಾಂಸ್ಕೃತಿಕ ಕಲಾ ವೈಭವ

    ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಮುಂಜಾನೆ ಅದ್ದೂರಿ ಚಾಲನೆ ದೊರೆಯಿತು. ಒಂಬತ್ತು ದಿನಗಳ ಕಾಲ ನಡೆಯುವ ವೈಭವಯುತ ಜಾತ್ರೆಯ ಮೊದಲ ದಿನದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿದವು. ಈ ಅಪೂರ್ವ ಕ್ಷಣಗಳಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
    ಮಂಗಳವಾರ ಮುಂಜಾನೆ 3 ಗಂಟೆಗೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾಯಿ ಮಾರಿಕಾಂಬೆಯ ತಾಳಿ ಮತ್ತು ಆಭರಣಗಳಿಗೆ ಪೂಜೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್ ವಿಧಿವಿಧಾನಗಳನ್ನು ನೆರವೇರಿಸಿದರು. ಜಾತ್ರಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನಂತರ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.
    ಮಹಾಗಣಪತಿ ದೇವಾಲಯದಿಂದ ದೇವಿಯ ಆಭರಣಗಳನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತವರುಮನೆಗೆ ತರಲಾಯಿತು. ಸಾಗರ ನಗರದ ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಅತ್ಯಾಕರ್ಷಕ ಶ್ರೀ ಮಾರಿಕಾಂಬಾ ದೇವಿ ವಿಗ್ರಹಕ್ಕೆ ವಿಧಿಬದ್ಧವಾಗಿ ಆಭರಣಗಳನ್ನು ತೊಡಿಸಲಾಯಿತು.
    ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದಂತೆ ಭಕ್ತರು ತಾಯಿಯ ವಿಗ್ರಹಕ್ಕೆ ಭಾರಿ ಗಾತ್ರದ ಹೂವಿನ ಹಾರ ಸೇರಿದಂತೆ ವೈವಿಧ್ಯಮಯ ಹೂವಿನ ಅಲಂಕಾರ ಮಾಡಿದರು. ಊರಿನ ಅಧಿದೇವತೆ ಮಾರಿಕಾಂಬೆಗೆ ಜಯಘೋಷ ಕೂಗಿದರು. ವಿವಿಧ ಸಾಂಪ್ರದಾಯಿಕ ಆಚರಣೆ ನಂತರ ದೇವಿಗೆ ಮಂಗಳಾರತಿ ಮಾಡುವ ಮೂಲಕ ವಿಧಿವಿಧಾನಗಳನ್ನು ಸಂಪನ್ನಗೊಳಿಸಲಾಯಿತು.
    ತವರು ಮನೆಯಲ್ಲಿ ತಾಯಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಧುಕರ್ ಭಟ್, ಪುರೋಹಿತ ರಮೇಶ್ ಭಟ್, ಗಜಾನನ ಜೋಯ್ಸ, ನೀಲಕಂಠ ಜೋಯ್ಸ, ಸದಾಶಿವ ಜೋಯ್ಸ, ರಾಘವೇಂದ್ರ ಭಟ್, ನವೀನ್ ಜೋಯ್ಸ, ಸುಧೀಂದ್ರ ಜೋಯ್ಸ, ಲಕ್ಷ್ಮಣ್ ಜೋಯ್ಸ ಇತರರು ಇದ್ದರು. ಗಣಪತಿ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನದ ತವರು ಮನೆಯವರೆಗೂ ಮೆರವಣಿಗೆಯಲ್ಲಿ ದೈವಜ್ಞ ಮಹಿಳಾ ಸಮಾಜದ ಸದಸ್ಯರು ಚಂಡೆವಾದನ ನಡೆಸಿಕೊಟ್ಟರು.
    ಫೆ.8ರಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಗಂಡನ ಮನೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು. 15ರವರೆಗೂ ದರ್ಶನಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಉಡಿಸೇವೆ, ತುಲಾಭಾರ ಸೇರಿದಂತೆ ಭಕ್ತರು ಹರಕೆ ಸಲ್ಲಿಸಲು ಜಾತ್ರಾ ಸಮಿತಿ ಸಕಲ ವ್ಯವಸ್ಥೆ ಮಾಡಿದೆ.
    15 ರಂದು ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ. ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಪ್ರಸಿದ್ಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.
    ದರ್ಶನಕ್ಕೆ ಸಾವಿರಾರು ಭಕ್ತರ ಸಾಲು: ಉತ್ಸವದ ಮೊದಲ ದಿನದಂದು ತವರುಮನೆಯಲ್ಲಿ ದೇವಿಯ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಸೇರಿದ್ದರು. ಮಂಗಳವಾರ ಬೆಳಗ್ಗೆ ಪೂಜೆ ಸಂದರ್ಭದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ಸರದಿ ಸಾಲು ಟೌನ್‌ಪೊಲೀಸ್ ಠಾಣೆ ದಾಟಿತ್ತು. ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ದೈವಜ್ಞ ಸಮಾಜದ ಯುವಕರು ಹಾಗೂ ಆನಂದ ಸಾಗರ ಟ್ರಸ್ಟ್‌ನಿಂದ ಚಹಾ, ಕಾಫಿ, ಬಾದಾಮಿ ಹಾಲನ್ನು ಉಚಿತವಾಗಿ ವಿತರಿಸಲಾಯಿತು. ಜಾತ್ರೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಮಂಗಳವಾರ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
    14 ಅಡಿ ಎತ್ತರದ ಮೂರ್ತಿ: ಕರ್ನಾಟಕ ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯೂ ಒಂದು. 14 ಅಡಿ ಎತ್ತರದ ಮಾರಿಕಾಂಬೆ ಮೂರ್ತಿಯು ಅತ್ಯಂತ ವಿಶಿಷ್ಟವಾಗಿದೆ. ಜಾತ್ರಾ ಪ್ರಯುಕ್ತ ಹಾಕಲಾಗಿದ್ದ ಮಳಿಗೆಗಳಲ್ಲಿ ಮೊದಲ ದಿನ ಉತ್ತಮ ವ್ಯಾಪಾರ ವಹಿವಾಟು ನಡೆಯಿತು. ಇನ್ನೂ ಕೆಲವರು ಮಳಿಗೆಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts