More

    ಇಟ್ಟಂಗಿ ಭಟ್ಟಿ ಸುತ್ತ ಅನುಮಾನದ ಹುತ್ತ

    ಶಿಗ್ಗಾಂವಿ: ತಾಲೂಕಿನಲ್ಲಿದ್ದ ಅಕ್ರಮ ಇಟ್ಟಂಗಿ ಭಟ್ಟಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಳೆದ ಕೆಲ ತಿಂಗಳ ಹಿಂದೆ ತೋರಿದ ಉತ್ಸಾಹವನ್ನು ಸಾರ್ವಜನಿಕರು ಮೆಚ್ಚಿದ್ದರು. ಆದರೆ, ಇದು ಇದೀಗ ಕಾರ್ಯರೂಪಕ್ಕೆ ಬಾರದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ತಾಲೂಕಿನ ಮಲೆನಾಡು ಪ್ರದೇಶವೆಂದೇ ಹೆಸರಾದ ಕೋಣನಕೇರಿ, ಭದ್ರಾಪೂರ, ಅಂದಲಗಿ, ಅಡವಿಸೋಮಾಪೂರ, ದುಂಡಶಿ, ಕುನ್ನೂರ, ಶ್ಯಾಡಂಬಿ, ಹುಲಸೋಗಿ, ಮಲ್ಲನಾಯ್ಕನಕೊಪ್ಪ ಸೇರಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇಟ್ಟಿಗೆ ತಯಾರಿಸುವ ಭಟ್ಟಿಗಳು ಹೆಚ್ಚಾಗಿದ್ದವು. ಆಗ ಅವರೆಲ್ಲರೂ ಕಾನೂನಿನಡಿ ಪರವಾನಗಿ ಪಡೆದು ಇಟ್ಟಂಗಿ ಭಟ್ಟಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನದ ಮೇರೆಗೆ ಪರಿಶೀಲನೆಗಾಗಿ ಕಂದಾಯ ಇಲಾಖೆಯು ನವೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ಮಾಡಿತ್ತು.

    ಈ ಹಿಂದಿನ ತಹಸೀಲ್ದಾರ್ ಚಂದ್ರಶೇಖರ ಗಾಳಿ ಅವರ ನೇತೃತ್ವದಲ್ಲಿ ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇಟ್ಟಂಗಿ ಭಟ್ಟಿಗಳ ಮೇಲೆ ದಿಢೀರ್ ದಾಳಿ ನಡೆಸಿ ನಾಲ್ಕು ಮಣ್ಣು ಹೇರುವ ಲಾರಿ (ಟಿಪ್ಪರ್), ಜೆಸಿಬಿ ಮತ್ತು ಸಲಕರಣೆಗಳನ್ನು ಜಪ್ತಿ ಮಾಡಿದ್ದರು. ಭಟ್ಟಿ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಿದ್ದರು. ಪರವಾನಗಿ ಇಲ್ಲದ ಭಟ್ಟಿಗಳನ್ನು ಸಕ್ರಮ ಮಾಡಿಕೊಳ್ಳಲು ಕಾಲಾವಕಾಶವನ್ನೂ ನೀಡಿದ್ದರು. 65 ಲಕ್ಷ ರೂ.ಗಿಂತ ಹೆಚ್ಚು ದಂಡ ವಿಧಿಸಿದ್ದ ಮಾಹಿತಿಯನ್ನು ಸ್ವತಃ ತಹಸೀಲ್ದಾರರೇ ಸುದ್ದಿಗೋಷ್ಠಿಯಲ್ಲಿ ನೀಡಿದ್ದರು.

    ಕಾರ್ಯಾಚರಣೆಯ ಕೆಲ ದಿನಗಳ ನಂತರ ಬಂದ್ ಆಗಿದ್ದ ಭಟ್ಟಿಗಳು ಮತ್ತೆ ಮೊದಲಿನಂತೆ ಇಟ್ಟಿಗೆ ತಯಾರಿಕೆ ಕೆಲಸ ಮುಂದುವರಿಸಿವೆ. ಆದರೆ, ಸಕ್ರಮಗೊಳಿಸಲು ನೀಡಿದ ಕಾಲಮಿತಿಯ ಗಡುವಿನಲ್ಲಿ ಎಲ್ಲರೂ ಸಕ್ರಮ ಮಾಡಿಕೊಂಡರೆ ಅಥವಾ ಇಲ್ಲವೇ ಎಂಬ ಸಂಗತಿ ಬೆಳಕಿಗೆ ಬಂದಿಲ್ಲ. ಅಲ್ಲದೆ, ದಾಳಿ ವೇಳೆ ವಿಧಿಸಿದ್ದ 65 ಲಕ್ಷ ರೂ. ದಂಡ ಸರ್ಕಾರದ ಖಜಾನೆಗೆ ಜಮೆ ಆಗಿದೆಯೇ ಇಲ್ಲವೇ ಎಂಬ ಅನುಮಾನ ಅವರ ಸಾರ್ವಜನಿಕರಲ್ಲಿ ಮೂಡಿದೆ.

    ಇದಲ್ಲದೆ, ಈಗಾಗಲೇ ಕೆಲ ಭಟ್ಟಿ ಮಾಲೀಕರು ಅರಣ್ಯ ಇಲಾಖೆಯ ಕೆಲ ಭೂಮಿಯನ್ನು ಅತಿಕ್ರಮಣ ಮಾಡಿ, ಅಲ್ಲಿನ ಮಣ್ಣನ್ನು ಅಗೆಯುತ್ತಿರುವ ದೂರುಗಳು ಕೇಳಿ ಬಂದಿವೆ. ಇಂಥ ಘಟನೆಗಳು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಅರಣ್ಯ ಇಲಾಖೆಯ ಗಮನಕ್ಕೆ ಈ ರೀತಿಯ ಅತಿಕ್ರಮಣ ವಿಷಯಗಳು ಈವರೆಗೂ ಬಂದಿಲ್ಲ. ಹಾಗೇನಾದರೂ ಅತಿಕ್ರಮಣದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ನೋಟೀಸ್ ನೀಡಲಾಗುವುದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು. – ಶಿವಾನಂದ ಪೂಜಾರ, ವಲಯ ಅರಣ್ಯಾಧಿಕಾರಿ ದುಂಡಸಿ

    ಈ ಕುರಿತಂತೆ ಹಿಂದೆ ನೋಟಿಸ್ ನೀಡಿರಬಹುದು. ಆದರೆ, ದಂಡ ವಸೂಲಾತಿ ಆಗಿರುವುದಿಲ್ಲ. ಈ ಕುರಿತು ದೂರುಗಳು ಬಂದಿವೆ. ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. -ಪ್ರಕಾಶ ಕುದರಿ, ತಹಸೀಲ್ದಾರ್ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts