More

    ಇಎಸ್​ಐಸಿ ಚಿಕಿತ್ಸಾಲಯ ಆರಂಭಕ್ಕೆ ಮಂಕು

    ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾ ತಾಲೂಕಿನಲ್ಲಿ ಕಾರ್ವಿುಕರ ರಾಜ್ಯ ವಿಮಾ ನಿಗಮ (ಇಎಸ್​ಐಸಿ) ದಿಂದ ಚಿಕಿತ್ಸಾಲಯ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿ ಶೀಘ್ರ ಕಾರ್ಯನಿರ್ವಹಿಸುವಂತಾಗಬೇಕಿದೆ.

    ಜಿಲ್ಲೆಯಲ್ಲಿ ಇಎಸ್​ಐಸಿ ಯೋಜನೆ 2016 ಮೇ 1ರಿಂದಲೇ ಜಾರಿಯಲ್ಲಿದ್ದು, 23000ಕ್ಕೂ ಅಧಿಕ ವಿಮಾದಾರರಿದ್ದಾರೆ. ಯೋಜನೆ ಜಾರಿಯಾಗಿ 4 ವರ್ಷಗಳಾದರೂ ಜಿಲ್ಲೆಯ ವಿಮಾದಾರರಿಗೆ ವೈದ್ಯಕೀಯ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಿಲ್ಲ. ಇದರಿಂದಾಗಿ ಸಾವಿರಾರು ಬಡ ಕಾರ್ವಿುಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸದ್ಯ ಕುಮಟಾದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್​ನಿಂದ ನಿರ್ವಹಿಸಲ್ಪಡುತ್ತಿರುವ ಇಎಸ್​ಐಸಿಯ ಮಾರ್ಪಡಿಸಿದ ಉದ್ಯೋಗದಾತರ ಉಪಯೋಗಿ ಚಿಕಿತ್ಸಾಲಯ (ಎಂಇಯುಡಿ) ಡಿಸ್ಪೆನ್ಸರಿ ಕೇವಲ ಒಬ್ಬ ಪ್ರಾಸಂಗಿಕ ವೈದ್ಯರನ್ನು ಒಳಗೊಂಡಿದ್ದು ನೆಪಮಾತ್ರಕ್ಕೆ ಎಂಬಂತಿದೆ.

    3000ಕ್ಕೂ ಹೆಚ್ಚು ಕಾರ್ವಿುಕ ಚಂದಾದಾರರಿರುವ ಪ್ರದೇಶದಲ್ಲಿ ಇಎಸ್​ಐಸಿ ಆಸ್ಪತ್ರೆ ತೆರೆಯಲು ಅವಕಾಶವಿದೆ. ಆದರೆ, ದಾಂಡೇಲಿಯಲ್ಲಿ ಮಾತ್ರ ಇದೆ. ಕರಾವಳಿಗರಿಗೆ ಇದು ದೂರದ ಸ್ಥಳ. ತಾಲೂಕಿನ ಕಾರ್ವಿುಕರು, ಗುತ್ತಿಗೆದಾರರು, ಉದ್ದಿಮೆದಾರರು 2016ರಿಂದ ಇಎಸ್​ಐಸಿಗೆ ಸತತವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ. 5 ತಿಂಗಳ ಹಿಂದೆ ಸಚಿವ ಶಿವರಾಮ ಹೆಬ್ಬಾರ ಸೂಚನೆಯಂತೆ ಕುಮಟಾದಲ್ಲಿ ಪೂರ್ಣಕಾಲಿಕ ಇಎಸ್​ಐಸಿ ಚಿಕಿತ್ಸಾಲಯ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಾರ್ವಿುಕ ಇಲಾಖೆಗೆ ನೀಡಲಾದ ನಿರ್ದೇಶನ ಜಾರಿಗೆ ಬರಬೇಕಿದೆ. ಎಲ್ಲ ಕಾರ್ವಿುಕರನ್ನು ಇಎಸ್​ಐಸಿಗೆ ಸೇರಿಸಲು ಸಾಮಾಜಿಕ ಭದ್ರತಾ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ ಎಂಬುದು ಕಾರ್ವಿುಕರ ಕೋರಿಕೆಯಾಗಿದೆ.

    ಇಎಸ್​ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೊಡಿ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೂಗು ಮುಗಿಲುಮುಟ್ಟಿದೆ. ರಾಜ್ಯ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಜಿಲ್ಲೆಯವರೇ ಆಗಿರುವುದರಿಂದ ಸಮಸ್ಯೆಯ ಅರಿವು ಸ್ಪಷ್ಟವಿದೆ. ಇಎಸ್​ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಅತಿಕಷ್ಟದ ಕೆಲಸವೇನಲ್ಲ. ಇದರಿಂದ ಕಾರ್ವಿುಕರಿಗೆ ಮಾತ್ರವಲ್ಲದೆ ಜಿಲ್ಲೆಯ ಸಮಸ್ತ ಜನತೆಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಸಚಿವ ಹೆಬ್ಬಾರ ಅವರಿಗೆ ಕುಮಟಾದಲ್ಲಿ ಮನವಿಯನ್ನೂ ಸಲ್ಲಿಸಲಾಗಿತ್ತು. ಕರೊನಾ ಮಹಾಮಾರಿಯ ಇಂಥ ಸಂದರ್ಭದಲ್ಲಾದರೂ ಜಿಲ್ಲೆಯ ರಾಜಕೀಯ, ಸಾಮಾಜಿಕ ಹಿತಾಸಕ್ತಿಗಳು ದೃಢ ಸಂಕಲ್ಪದೊಂದಿಗೆ ಜನರ ಆರೋಗ್ಯದತ್ತ ಗಮನಹರಿಸಬೇಕು. ಕುಮಟಾ ತಾಲೂಕಿನಲ್ಲೇ ಇಎಸ್​ಐಸಿ ಡಿಸ್ಪೆನ್ಸರಿ ಹಾಗೂ ಇಎಸ್​ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ನಿಯಮಾನುಸಾರ ಉತ್ತರ ಕನ್ನಡ ಜಿಲ್ಲೆಯು 300 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಇಎಸ್​ಐಸಿ ಆಸ್ಪತ್ರೆ ತೆರೆಯಲು ಅರ್ಹವಾಗಿದೆ. ಅದನ್ನು ಜಿಲ್ಲೆಯ ಅತ್ಯಂತ ಸೂಕ್ತ ಕೇಂದ್ರ ಸ್ಥಾನವಾದ ಕುಮಟಾದಲ್ಲಿ ಸ್ಥಾಪಿಸಬಹುದಾಗಿದೆ. ಕಾರ್ವಿುಕ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದಿಂದ ಈ ಬಗ್ಗೆ ಧನಾತ್ಮಕ, ಆಶಾದಾಯಕ ಪ್ರತಿಕ್ರಿಯೆಗಾಗಿ ಕಾರ್ವಿುಕ ವಿಮಾದಾರರು, ಸಾರ್ವಜನಿಕರು ಅನೇಕ ವರ್ಷಗಳಿಂದ ಕಾಯುತ್ತಿದ್ದಾರೆ.

    ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಈವರೆಗೆ ನಡೆಸಿದ ಯಾವ ಪ್ರಯತ್ನಗಳು ದಡ ಮುಟ್ಟುತ್ತಿಲ್ಲ. ಆದರೆ, ಇಎಸ್​ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯುವುದು ಸಾಧ್ಯವಿದೆ. ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ರಾಜ್ಯ ಹಾಗೂ ಕೇಂದ್ರದ ಸಹಯೋಗದಲ್ಲಿ ಈ ಕೆಲಸ ತುರ್ತಾಗಿ ಆಗುವಂತೆ ಪ್ರಯತ್ನಿಸಲಿ.

    | ಚಿದಾನಂದ ಭಂಡಾರಿ

    ಸಾಮಾಜಿಕ ಕಾರ್ಯಕರ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ

    ಜಿಲ್ಲೆಯಲ್ಲಿ ಇಎಸ್​ಐ ಆಸ್ಪತ್ರೆ ಬೇಡಿಕೆ ಬಗ್ಗೆ ಡಿಸ್ಪೆನ್ಸರಿ ಕಾರ್ಯನಿರ್ವಹಿಸದ ವಿಚಾರ ಗಮನಕ್ಕಿದೆ. ಕಾರ್ವಿುಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ಮಾಡಲು ಮಾತುಕತೆ ನಡೆದಿದೆ. ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಶೀಘ್ರ ಈ ಸಂಬಂಧ ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು.

    ಶಿವರಾಮ ಹೆಬ್ಬಾರ, ಕಾರ್ವಿುಕ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts