More

    ಇಂದ್ರಧನುಷ್ ಯಶಸ್ವಿಗೊಳಿಸಿ

    ಮಂಡ್ಯ: ಪೋಷಕರು ನಿಗದಿತ ಸಮಯದಲ್ಲಿ ವಯಸ್ಸಿಗೆ ಅನುಗುಣವಾಗಿ 5 ವರ್ಷದವರೆಗಿನ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಅಶ್ವಿನಿ ತಿಳಿಸಿದರು.

    ಶ್ರೀರಂಗಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಇಲಾಖೆಯ ಇಂದ್ರಧನುಷ್ ಲಸಿಕೆ ಅಭಿಯಾನ ಕುರಿತ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು. ಸಾರ್ವಜನಿಕರು ಕೈಜೋಡಿಸಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್ ಮಾತನಾಡಿ, 3 ಹಂತಗಳಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಿವಿಧ ಕಾರಣಗಳಿಂದ ಲಸಿಕೆ ವಂಚಿತರಾದ ಮಕ್ಕಳಿಗೆ ಆ.7 ರಿಂದ 12ರವರೆಗೆ, ಸೆಪ್ಟೆಂಬರ್ 11 ರಿಂದ 16 ರವರೆಗೆ , ಅಕ್ಟೋಬರ್ 9 ರಿಂದ 14 ರವರೆಗೆ ತಾಲೂಕಿನಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯವಾಗಿ ಹೈರಿಸ್ಕ್ ಸ್ಥಳಗಳು, ವಲಸೆ ಕಾರ್ಮಿಕರು, ಕಬ್ಬು ಕಟಾವು ಕಾರ್ಮಿಕರು, ಕ್ವಾರಿ ಕೆಲಸಗಾರರು ಇರುವ ಸ್ಥಳಗಳಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳ ಪತ್ತೆಗಾಗಿ ಸಮೀಕ್ಷೆ ನಡೆಸಲಾಗುತ್ತದೆ. 2023ರ ಡಿಸೆಂಬರ್ ಅಂತ್ಯದ ವೇಳೆಗೆ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಮಾಡಲು ಪಣ ತೊಡಲಾಗಿದ್ದು, ಮಗುವಿಗೆ 9ನೇ ತಿಂಗಳು ಹಾಗೂ 16ನೇ ತಿಂಗಳ ಅವಧಿಯಲ್ಲಿ ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ದಡಾರ, ರುಬೆಲ್ಲಾ ನಿರ್ಮೂಲನೆಗೆ ಸಹರಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ೆನ್ನೂರ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ್ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಆರ್‌ಬಿಎಸ್‌ಕೆ ತಂಡದ ವೈದ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts