More

    ಇಂದಿನಿಂದ ಬಸ್ ಸಂಚಾರ ಪುನರಾರಂಭ

    ಗದಗ: ಲಾಕ್​ಡೌನ್ ಸಡಿಲಗೊಳಿಸಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಜಿಲ್ಲೆಯಲ್ಲಿ 228 ಬಸ್​ಗಳು ರಸ್ತೆಗೆ ಇಳಿಯಲಿದ್ದು, ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಸಂಚರಿಸಲಿವೆ. 7 ಗಂಟೆ ನಂತರ ಯಾವುದೇ ಕಾರಣಕ್ಕೂ ಬಸ್ ಸಂಚಾರಕ್ಕೆ ಅವಕಾಶವಿಲ್ಲ.

    ಜಿಲ್ಲೆಯೆಲ್ಲೆಡೆ ಮೊದಲಿನಂತೆ ಬಸ್ ಸಂಚರಿಸಲಿವೆ. ಆದರೆ, ಬಸ್ ಸಂಚಾರಕ್ಕೆ ಸಮಯ ನಿಗದಿ ಮಾಡಿದ್ದರಿಂದ ಕೆಲ ಗ್ರಾಮಗಳಿಗೆ ತೆರಳುವ ಬಸ್ ಸಮಯದಲ್ಲಿ ಬದಲಾವಣೆ ಆಗಲಿದೆ. ರಾತ್ರಿ ನಿಷೇಧಾಜ್ಞೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಯಾವುದೇ ಬಸ್​ಗಳು ವಸತಿ ಇರುವುದಿಲ್ಲ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಹಕಾರ ನೀಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಗದಗ-ಬೆಟಗೇರಿ ಅವಳಿನಗರದಲ್ಲಿ ಇರುವ ಜಿಲ್ಲಾಸ್ಪತ್ರೆ, ಹೊಸ ಬಸ್ ನಿಲ್ದಾಣ ಮತ್ತಿತರ ನಗರ ಸಾರಿಗೆ ಬಸ್ ರೂಟ್​ಗಳು ಕಾರ್ಯ ನಿರ್ವಹಿಸಲಿವೆ. ಅಂತರ ಜಿಲ್ಲೆಗಳಿಗೂ ಮಂಗಳವಾರ ಬಸ್ ಸಂಚಾರ ಆರಂಭವಾಗಲಿದ್ದು, ಮೊದಲಿದ್ದ ಶೆಡ್ಯೂಲ್​ನಂತೆ ಬಸ್​ಗಳು ಕಾರ್ಯ ನಿರ್ವಹಣೆ ಮಾಡಲಿವೆ. ಬೆಂಗಳೂರು, ಮೈಸೂರು ನಗರಕ್ಕೂ ಬಸ್ ಸಂಚಾರ ಆರಂಭಿಸಲಾಗುವುದು. ಸರ್ಕಾರ ನಿಗದಿ ಪಡಿಸಿದ ಸಮಯದಲ್ಲಿ ಮಾತ್ರ ಸಂಚರಿಸಲಿವೆ. ಮಂಗಳವಾರ ಬಸ್ ಸಂಚಾರ ಆರಂಭಿಸುವುದರಿಂದ ಚಾಲಕ ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಬಸ್​ಗಳನ್ನು ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಸ್ಕ್ ಕಡ್ಡಾಯ : ಬಸ್​ನಲ್ಲಿ ಪ್ರಯಾಣಿಸುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಲು ಸರ್ಕಾರ ನೀಡಿರುವ ಆದೇಶವನ್ನು ಪಾಲನೆ ಮಾಡಲಾಗುವುದು. ಬಸ್​ನಲ್ಲಿ ಇಬ್ಬರು ಕೂಡುವ ಸೀಟ್​ನಲ್ಲಿ ಒಬ್ಬರು, ಮೂವರು ಕೂಡುವ ಸೀಟ್​ನಲ್ಲಿ ಇಬ್ಬರನ್ನು ಮಾತ್ರ ಕೂಡಿಸಲಾಗುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರದಿಂದ ಬಸ್ ಸಂಚಾರ ಆರಂಭಿಸಲಾಗುವುದು. ಗ್ರಾಮೀಣ ಭಾಗದ ಬಸ್ ಸಂಚಾರದಲ್ಲಿ ಸಮಯದ ಬದಲಾವಣೆ ಅನಿವಾರ್ಯ. ಹೀಗಾಗಿ ಜನರು ಸಹಕಾರ ನೀಡಬೇಕು. ಬೇಗನೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಸ್ವಗ್ರಾಮಗಳಿಗೆ ತಲುಪಬೇಕು. ರಾತ್ರಿ 7ಗಂಟೆ ನಂತರ ಯಾವುದೇ ಕಾರಣಕ್ಕೂ ಬಸ್ ಸಂಚರಿಸುವುದಿಲ್ಲ. ಪ್ರಯಾಣಿಕರು ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.

    |ಎಫ್.ಸಿ. ಹಿರೇಮಠ, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts