More

    ಇಂಥ ಕೆಟ್ಟ ಸರ್ಕಾರ ನೋಡಿಲ್ಲ

    ಚಿತ್ರದುರ್ಗ: ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಾತಂತ್ರೃ ನಂತರ ರಾಜ್ಯದಲ್ಲಿ ಇಂಥಾ ಕೆಟ್ಟ ಸರ್ಕಾರ ನೋಡಿಲ್ಲ. ಇನ್ನಾದರೂ ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರೂವರೆ ತಿಂಗಳಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಕಾರಿಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ದೂರಿದರು.

    13 ಸಾವಿರಕ್ಕೂ ಅಧಿಕ ಕೋಟಿ ರೂ. ಸಾಲ ನೀಡಲಾಗಿದೆ. 17 ಸಾವಿರ ರೈತರು ಮಧ್ಯಮಾವಧಿ ಸಾಲ ಪಡೆದಿದ್ದು, ರಾಜ್ಯಾದ್ಯಂತ ಬರವಿರುವ ಕಾರಣ ಪಾವತಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಆದ್ದರಿಂದ ತಲಾ 2 ಲಕ್ಷ ರೂ. ಸಾಲ ಮನ್ನಾ ಮಾಡಬೇಕು. ಅದನ್ನು ಬಿಟ್ಟು ಅಸಲು ಪಾವತಿಸಿದರೆ, ಬಡ್ಡಿ ಮನ್ನಾ ಎಂಬುದೇ ಮೋಸದ ಆಟ ಎಂದು ಕಿಡಿಕಾರಿದರು.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಪರಿಹಾರ, ಪ್ರಗತಿ ದೃಷ್ಟಿಯಿಂದ ಸುವರ್ಣಸೌಧ ನಿರ್ಮಿಸಿದರು. ಬಿಜೆಪಿ ಅವಧಿಯಲ್ಲಿ ನಡೆದ ಕೊನೆ ಅಧಿವೇಶನದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ 22 ಸಾವಿರ ಕೋಟಿ ರೂ. ಕಾಮಗಾರಿಗೆ ಒಪ್ಪಿಗೆ ಸೂಚಿಸಿದ್ದರು. ಈಗಿನ ಸರ್ಕಾರ ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸಿ, ಎಂಟು ಘೋಷಣೆ ಮಾಡಿದ್ದರೂ ಅಭಿವೃದ್ಧಿ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಿಲ್ಲ ಎಂದರು.

    ಈ ಭಾಗದ ಕೈಗಾರಿಕೆಗಳು ಮುಚ್ಚುತ್ತಿವೆ. ಜನ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ವಿದ್ಯುತ್ ಪೂರೈಕೆಗೆ ಸಿಎಂ ಕ್ರಮ ಕೈಗೊಳ್ಳಬೇಕು. ರೈತರ ಕ್ಷೇಮಾಭಿವೃದ್ಧಿಗಾಗಿ ಬಿಜೆಪಿ ಅವಧಿಯಲ್ಲಿ 16 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದ ಅನುದಾನದಲ್ಲಿ ಈಗಿನ ಸರ್ಕಾರ 6 ಸಾವಿರ ಕೋಟಿ ರೂ. ಕಡಿತಗೊಳಿಸಿದೆ ಎಂದು ದೂರಿದರು.

    ಅನುದಾನಕ್ಕಾಗಿ ದಾಖಲೆ ಸಲ್ಲಿಸಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ಪೈಕಿ 1 ರೂಪಾಯಿ ಅನುದಾನ ಬಂದಿಲ್ಲವೆಂದು ಸಿಎಂ ದೂರುತ್ತಿದ್ದಾರೆ. ಆದರೆ, ತೋಟ, ಕೃಷಿ ಜಮೀನುಗಳಿಗೆ ನೀರು ಹರಿಸಲು ಕೃಷಿ ಸಂಜೀವಿನಿ ಯೋಜನೆಯಡಿ ಬಳಕೆಗೆ ಅವಕಾಶ ಇದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದಲ್ಲಿ ಬಿಡುಗಡೆಯಾಗಲಿದೆ ಎಂದು ಕಾರಜೋಳ ತಿಳಿಸಿದರು.

    ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಎಂಎಲ್ಸಿ ಪ್ರೊ.ಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ವೆಂಕಟೇಶ್ ಯಾದವ್, ನರೇಂದ್ರ, ಸಿದ್ದೇಶ್, ಶೈಲೇಶ್, ಕಲ್ಲೇಶಯ್ಯ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts