More

    ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು, ಸಿಎಂ ಭೇಟಿ ಬೆನ್ನಲ್ಲೇ ಆಡಳಿತಾತ್ಮಕ ಅನುಮೋದನೆ, ಬರದ ನಾಡಿನ ಕಾಳಜಿ ಮೆರೆದ ಭಗೀರಥ

    ವಿಜಯಪುರ: ಇಂಡಿ ತಾಲೂಕಿನ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪುನರ್ಜನ್ಮ ನೀಡಿರುವ ಜಲಸಂಪನ್ಮೂಲ ಮಾಜಿ ಸಚಿವ ಡಾ.ಎಂ.ಬಿ. ಪಾಟೀಲ ಮೊದಲ ಹಂತದಲ್ಲಿ 16 ಕೆರೆಗಳಿಗೆ ನೀರು ತುಂಬಿಸಲು ಆಡಳಿತಾತ್ಮಕ ಅನುಮೋದನೆ ಕೊಡಿಸುವ ಮೂಲಕ ಬರದ ನಾಡಿನ ಭಗೀರಥ ಎಂಬ ಪಟ್ಟ ಬಲಪಡಿಸಿಕೊಂಡಿದ್ದಾರೆ.
    ಶುಕ್ರವಾರ ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ ಕೆಲವೇ ಘಂಟೆಯಲ್ಲಿ ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
    ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ಇಂಡಿ ತಾಲೂಕಿನ 16 ಕೆರೆಗಳಿಗೆ ತಿಡಗುಂದಿ ಶಾಖಾ ಕಾಲುವೆಯಿಂದ ಗುರುತ್ವ ಮೂಲಕ ನೀರು ತುಂಬಿಸುವ ಅಂದಾಜು 140 ಕೋಟಿ ರೂ.ಮೊತ್ತದ ಕಾಮಗಾರಿ ಕೈಗೊಳ್ಳಲು ಸಿಎಂ ಅನುಮೋದಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದಾರೆ.
    ಸದರಿ ಯೋಜನೆಯಿಂದ ಇಂಡಿ ತಾಲೂಕಿನ ಜಿಗಜೇವಣಿ, ಇಂಚಗೇರಿ-1, ಇಂಚಗೇರಿ-2, ದೇಗಿನಾಳ-1, ದೇಗಿನಾಳ-2, ಬಬಲಾದ, ಕೂಡಗಿ, ಸೊನಕನಹಳ್ಳಿ, ಗುಂದವಾನ, ಕೊಳೂರಗಿ, ಸಾವಳಸಂಗ, ಹಳಗುಣಕಿ, ಹಡಲಸಂಗ, ನಂದರಗಿ, ಸಾತಲಗಾಂವ, ಹೊರ್ತಿ ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಬರಗಾಲ ಪೀಡಿತ ಪ್ರದೇಶವಾದ ಇಂಡಿ ತಾಲೂಕಿನ ರೈತರು ಹಾಗೂ ಜಾನುವಾರಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳೆಗಳಿಗೂ ನೀರು ಸಿಗಲಿದೆ.
    ಈ ಹಿಂದೆ ಅಂದರೆ ಜೂ.8, 2020ರಂದು ಜರುಗಿದ 16 ತಾಂತ್ರಿಕ ಉಪ ಸಮಿತಿ ಶಿಫಾರಸ್ಸಿನ ಅನ್ವಯ ಹಾಗೂ ಅ.5, 2020ರಂದು ಜರುಗಿದ ನಿಗಮದ 126ನೇ ನಿರ್ದೇಶಕರ ಮಂಡಳಿಯಲ್ಲಿ ಅನುಮೋದನೆಗೊಂಡಿತ್ತು. ಆದರೆ, ಆರ್ಥಿಕ ಇಲಾಖೆ ಹಣಕಾಸು ಪರಿಸ್ಥಿತಿ ಗಮನಿಸಿ ಮುಂದೂಡಿತ್ತು. ಇದೀಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗಿ ತ್ವರಿತವಾಗಿ ಸ್ಪಂದಿಸಿದ್ದು ಸಂತಸದ ಸಂಗತಿ ಎಂದು ಡಾ.ಎಂ.ಬಿ. ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts