More

    ಆಹಾರ ಸರಬರಾಜು ಇಲಾಖೆ ಕಾರ್ಯ ಜನಸ್ನೇಹಿ

    ಬೆಳಗಾವಿ: ಆಹಾರ ನಾಗರಿಕ ಸರಬರಾಜು ಇಲಾಖೆ ಜಿಲ್ಲೆಯಲ್ಲಿ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಪಡೆದುಕೊಂಡಿರುವ ವಸ್ತುಗಳಲ್ಲಿ ಏನಾದರೂ ಲೋಪ-ದೋಷ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ’ ಎಂಬ ಘೋಷ ವಾಕ್ಯದೊಂದಿಗೆ ಗ್ರಾಹಕರ ದಿನ ಆಚರಿಸಲಾಗುತ್ತಿದೆ. ಗ್ರಾಹಕರು ವ್ಯಾಪಾರ-ವಹಿವಾಟು ಪ್ರಕ್ರಿಯೆಯಲ್ಲಿ ಇರುವ ರೀತಿ-ನೀತಿಗಳನ್ನೂ ತಿಳಿದುಕೊಳ್ಳಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಸುನಂದಾ ಕಾದ್ರೊಳ್ಳಿಮಠ ಮಾತನಾಡಿ, ಹೆಚ್ಚಿನ ಬಡ್ಡಿ ಆಸೆಯಿಂದಾಗಿ ಸೊಸೈಟಿಗಳಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ ಎಂದರು.

    ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಎನ್.ಆರ್. ಲಾತೂರ ಮಾತನಾಡಿ, ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಗ್ರಾಹಕರ ಕುಂದು-ಕೊರತೆ ಬಗ್ಗೆ ದೂರು ನೀಡುವ ಮೂಲಕ ವಕೀಲರ ಸಹಾಯವಿಲ್ಲದೆ ನ್ಯಾಯ ಪಡೆದುಕೊಳ್ಳಬಹುದು ಎಂದರು. ಎಲ್‌ಪಿಜಿ (ಸೇಲ್ಸ್) ಐಒಸಿ ಮುಖ್ಯ ವ್ಯವಸ್ಥಾಪಕ ಎಂ.ಎಸ್.ಜೋಶಿ ಮಾತನಾಡಿ, ಎಲ್‌ಪಿಜಿ ಸುರಕ್ಷತೆ ಹಾಗೂ ಗ್ಯಾಸ್‌ಬಳಕೆ ಬಗ್ಗೆ ಮಾಹಿತಿ ನೀಡಿದರು. ರವೀಂದ್ರ ಕರಲಿಂಗಣ್ಣವರ, ಗ್ರಾಹಕ ಸಂರಕ್ಷಣಾ ಕಾಯ್ದೆಯ ಮಹತ್ವ ವಿವರಿಸಿದರು.

    ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಎಸ್.ಆರ್. ಮಾಳಿ, ಸಹಾಯಕ ನಿಯಂತ್ರಕ ಎಸ್.ಎಸ್. ಉಪ್ಪಾರ ಇತರರಿದ್ದರು. ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಜೆ.ಸಿ. ಅಷ್ಟಗಿಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts