More

    ಆಸ್ತಿ ಕಬಳಿಸುವವರಿಗೆ ಟ್ರಸ್ಟ್‌ನೊಳಗೆ ಅವಕಾಶವಿಲ್ಲ

    ಚಿತ್ರದುರ್ಗ: ಛಲವಾದಿ ಗುರುಪೀಠದ ಜಮೀನು ಕಬಳಿಸಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಟ್ರಸ್ಟ್‌ನೊಳಗೆ ಅಂಥವರಿಗೆ ಅವಕಾಶವಿಲ್ಲ. ಇದನ್ನು ಹೊರತುಪಡಿಸಿ ಪೀಠಕ್ಕೆ ಯಾರ ವಿರೋಧವೂ ಇಲ್ಲ ಎಂದು ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಸ್ಪಷ್ಟಪಡಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೀಠದ ಕೋಣೆಗಳಿಗೆ ಯಾರು ಬೀಗ ಹಾಕಿಲ್ಲ. ಎಲ್ಲವೂ ನನ್ನ ಬಳಿಯೇ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಗುರುಪೀಠ ಸ್ಥಾಪನೆಯಾಗಿ 22 ವರ್ಷವಾಗಿದ್ದು, 2027ಕ್ಕೆ ಬೆಳ್ಳಿ ಮಹೋತ್ಸವ ಆಚರಿಸುವ ಸಂಬಂಧ ತಮ್ಮ ಶಕ್ತ್ಯಾನುಸಾರ ನೆರವು, ಸಲಹೆ-ಸೂಚನೆ ನೀಡಲಿಕ್ಕಾಗಿ ಪೀಠದಲ್ಲಿ ಒಂದು ಪುಸ್ತಕ ಇಟ್ಟಿದ್ದೇವೆ. ಅದರೊಳಗೆ ಮುಂದಿನ 6 ತಿಂಗಳು ತಮ್ಮ ಅಭಿಪ್ರಾಯ ದಾಖಲಿಸಲು ಅವಕಾಶವಿದೆ ಎಂದರು.

    12ರಿಂದ 16 ವರ್ಷದ ಮರಿ ಸ್ವಾಮಿ ಹುಡುಕಾಟದಲ್ಲಿದ್ದು, ಸಮುದಾಯದ ಆಸಕ್ತ ಪಾಲಕರು ಸ್ವ-ಇಚ್ಛೆಯಿಂದ ದೇವರು, ಧರ್ಮ, ಅಧ್ಯಾತ್ಮದ ಕುರಿತು ಒಲವಿರುವ ತಮ್ಮ ಮಗನನ್ನು ಪೀಠಕ್ಕೆ ಒಪ್ಪಿಸಿದಲ್ಲಿ ಲಂಡನ್‌ನಲ್ಲಿ ವಿದ್ಯಾಭ್ಯಾಸ ಕೊಡಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಸಮುದಾಯದ ಮುಖಂಡ ಜಿ.ಇ.ಮಂಜುನಾಥ ಮಾತನಾಡಿ, ಬೇರೆ ಮಠಗಳಂತೆ ನಮ್ಮ ಗುರುಪೀಠ ಬೆಳವಣಿಗೆಯಾಗಿಲ್ಲ. ಅದಕ್ಕೆ ಕಾರಣ ಏನೇ ಇದ್ದರೂ ಸಮುದಾಯ ಸಂಘಟನೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ಮಠಕ್ಕೆ ಅಗತ್ಯ ನೆರವು ನೀಡಲು ಮುಂದಾಗೋಣ ಎಂದು ಮನವಿ ಮಾಡಿದರು.

    ಮಧ್ಯಕರ್ನಾಟಕದಲ್ಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಅಲ್ಲದೆ, ನಮ್ಮ ಸಮಾಜದಲ್ಲಿಯೇ ಕೆಲವರು ಗುರುಪೀಠಕ್ಕೆ ವಿರೋಧವಾಗಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಕೋರಿದರು.

    ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಶೇಷಪ್ಪ, ಗೌರವಾಧ್ಯಕ್ಷ ಎಚ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷ ಜಿ.ಕೆ. ಓಂಕಾರಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ಆರ್.ರವೀಂದ್ರ, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಟಿ.ನರಸಿಂಹಮೂರ್ತಿ, ಮುಖಂಡ ರಾಮಚಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts