More

    ಆಸ್ತಿತೆರಿಗೆ ವಿನಾಯಿತಿಗಾಗಿ ಕಾಯ್ದೆ ತಿದ್ದುಪಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅಭಯ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಧಿಸಲಾಗುತ್ತಿರುವ ಆಸ್ತಿತೆರಿಗೆ ಪದ್ಧತಿಯಡಿ ವಿನಾಯಿತಿ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

    ಪಾಲಿಕೆಯ ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ ಶೇಷಾದ್ರಿಪುರದ ಶಿರೂರ್ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ತೆರಿಗೆ ವಿಚಾರದಲ್ಲಿ ದುಬಾರಿ ದಂಡ ವಿಧಿಸಲಾಗುತ್ತಿದೆ ಎಂಬ ದೂರು ಜನರಿಂದ ವ್ಯಕ್ತವಾಗುತ್ತಿದೆ. 2020ರಲ್ಲಿ ಜಾರಿಗೆ ಬಂದ ಆಸ್ತಿತೆರಿಗೆ ಕುರಿತ ಕಾಯ್ದೆಯಿಂದಾಗಿ ಹೆಚ್ಚು ಪ್ರಮಾಣದ ದಂಡ ವಿಧಿಸುತ್ತಿರಬಹುದು. ಈಗ ಆ ಕಾನೂನಿಗೆ ತಿದ್ದುಪಡಿ ತರಬೇಕಿದೆ. 30/40 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ವಿನಾಯಿತಿ ಹಾಗೂ ದಂಡ ಕಡಿಮೆ ಮಾಡಲು ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ತೆರಿಗೆ ಪಾವತಿಸುವಂತೆ ನೋಟಿಸ್ ನೀಡುತ್ತಿರುವುದರಿಂದ ಜನತೆ ಗಾಬರಿಯಾಗಬೇಕಿಲ್ಲ. ದಂಡದ ಪ್ರಮಾಣವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಲಾಗುವುದು. ಕೆಲ ದಿನಗಳಲ್ಲಿಯೇ ಈ ತಿದ್ದುಪಡಿ ಕುರಿತು ಸ್ವತ್ತುದಾರರಿಗೆ ಮಾಹಿತಿ ನೀಡಲಾಗುವುದು. ಸ್ವತಃ ಸರ್ಕಾರವೇ ಸಮೀಕ್ಷೆ ಮಾಡಿಸಿ, ಜನರ ಮನೆ ಬಾಗಿಲಿಗೇ ಸ್ವತ್ತಿನ ದಾಖಲೆಗಳನ್ನು ಉಚಿತವಾಗಿ ತಲುಪಿಸಲಾಗುವುದು. ಆಸ್ತಿತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರದಂತೆಯೂ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಯಾರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೋ, ಅವರಿಂದ ಅಷ್ಟು ಕಟ್ಟಿಸಿಕೊಳ್ಳಿ. ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ ಮುಂದಿನ ವರ್ಷ ಅದನ್ನು ಸರಿದೂಗಿಸಲು ಸೂಚಿಸಿರುವುದಾಗಿ ಡಿಸಿಎಂ ಸ್ಪಷ್ಟಪಡಿಸಿದರು.

    ತಳ್ಳುಗಾಡಿಯಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ:

    ಶಾಸಕ ಡಾ.ಅಶ್ವತ್ಥನಾರಾಯಣ ಅವರು ಆಸ್ತಿತೆರಿಗೆ ಮತ್ತು ಪಾದಚಾರಿ ಮಾರ್ಗ ವಿಚಾರವಾಗಿ ಗಮನ ಸೆಳೆದಿದ್ದಾರೆ. ಈ ವಿಚಾರವಾಗಿ ಹೈಕೋರ್ಟ್ ಆದೇಶ ಕೂಡ ಬಂದಿದೆ. ಆ ಆದೇಶ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರು ಜೈಲಿಗೆ ಹೋಗಬೇಕಾಗುತ್ತದೆ. ಬೀದಿಬದಿ ವರ್ತಕರು ವ್ಯಾಪಾರ ಮಾಡಬಾರದು ಎಂದು ಹೇಳುವುದಿಲ್ಲ. ನೀವು ನೋಂದಣಿ ಮಾಡಿಸಿಕೊಂಡು, ತಳ್ಳುವ ಗಾಡಿಯಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಅಂಗಡಿ ಹಾಕಿಕೊಂಡರೆ ಜನಸಾಮಾನ್ಯರು ಎಲ್ಲಿ ಓಡಾಡಬೇಕು? ಎಂದು ಪ್ರಶ್ನಿಸಿದರು.

    ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಂದಾಜು 2 ಸಾವಿರ ಕೋಟಿ ರೂ. ಮೌಲ್ಯದ ವೈಟ್ ಟ್ಯಾಪಿಂಗ್ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗಳನ್ನು ಆದಷ್ಟು ಬೇಗನೆ ಚಾಲನೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿಗಾ ವಹಿಸಲಾಗುವು ಎಂದು ಡಿಸಿಎಂ ವಿವರಿಸಿದರು.
    ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯಸಭಾ ಮಾಜಿ ಸದಸ್ಯ ರಾಜೀವ್ ಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಎನ್. ಜಯರಾಮ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಹೊಸ ಜಾಹೀರಾತು ನೀತಿ:

    ನಗರದಲ್ಲಿ ಅನಧಿಕೃತ ಜಾಹೀರಾತು ಫ್ಲೆಕ್ಸ್‌ಗಳ ನಿಷೇಧ ಮಾಡಲಾಗಿದೆ. ನನ್ನ ಮನೆ ಬಳಿ ಸೇರಿ ಅನೇಕ ಕಡೆಗಳಲ್ಲಿ ಹಬ್ಬ, ಹೊಸವರ್ಷದ ಶುಭಾಶಯಗಳ ಫ್ಲೆಕ್ಸ್ ಹಾಕಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾವುದೇ ಪಕ್ಷದವರಾಗಿರಲಿ, ನನ್ನ ಫೋಟೋ ಹಾಕಿರಲಿ ಅಥವಾ ಬೇರೆಯವರ ಫೋಟೋ ಹಾಕಿರಲಿ ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡುವಂತೆ ಸೂಚಿಸಿರುವೆ. ್ಲೆಕ್ಸ್ ಹಾವಳಿ ತಡೆಗೆ ಹೊಸ ಜಾಹೀರಾತು ನೀತಿಯನ್ನು ತರಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಬಡವರಿಗೆ ಲಕ್ಷ ಮನೆ ಯೋಜನೆ:

    ಹಿಂದಿನ ಸರ್ಕಾರ ಬಡವರಿಗೆ 1 ಲಕ್ಷ ಮನೆ ಕಟ್ಟಿಕೊಡುವುದಾಗಿ ಹೇಳಿದ್ದು, ಯಾರಿಗೂ ಮನೆ ಸಿಕ್ಕಿಲ್ಲ. ಈ ವಿಚಾರವಾಗಿ ಅನೇಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ವಸತಿ ಹಂಚಿಕೆ ಮಾಡಲಾಗುವುದೆಂದು ವಸತಿ ಸಚಿವರು ತಿಳಿಸಿದ್ದಾರೆ. ಕೆಲವರು ಹಣ ಕಟ್ಟಿದ್ದು, ಮತ್ತೆ ಕೆಲವರು ಹಣ ಪಾವತಿಸದೆ ವಿನಾಯಿತಿ ಕೇಳುತ್ತಿದ್ದಾರೆ. ಬಡವರಿಗೆ ವಸತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಕಾರ್ಯಕ್ರಮದಲ್ಲಿ ವಸತಿ ಕುರಿತು ಬಂದಿರುವ ಅರ್ಜಿಗಳನ್ನು ಲೆಕ್ಕ ಹಾಕಿ ಅರ್ಹರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.

    ಶಾಲೆ ಅಭಿವೃದ್ಧಿಗೆ ಮನವಿ:

    ಕಾಟನ್‌ಪೇಟೆ ವಾರ್ಡ್ ವ್ಯಾಪ್ತಿಯ ಅರಳೇಪೇಟೆ ಪ್ರೌಢಶಾಲೆ ಶಿಥಿಲಾವಸ್ಥೆ ತಲುಪಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿದಿದೆ. ಕಟ್ಟಡ ಸರಿಯಿಲ್ಲದ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದು, ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದು ದಮನಿರತ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಸ್.ಪ್ರಭಾಕರ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಶಾಲೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts